ನಿಮ್ಮ ಮಾರ್ಗದರ್ಶನ ಪಡೆದೇ ರಾಜಕೀಯ ಹೆಜ್ಜೆ ಇಟ್ಟಿದ್ದೇನೆ: ಸಿಎಂ ಕಾಲೆಳೆದ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ
ಬೆಂಗಳೂರು, ಸೆ. 13: ‘ಸಾರ್ ನಾನು ಕಾಲ ಕಾಲಕ್ಕೆ ನಿಮ್ಮ(ಬಸವರಾಜ ಬೊಮ್ಮಾಯಿ) ಮಾರ್ಗದರ್ಶನವನ್ನೂ ಪಡೆದೇ ರಾಜಕೀಯವಾಗಿ ಮುಂದೆ ಹೆಜ್ಜೆ ಇಟ್ಟಿದ್ದು' ಎಂದು ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ ಹೇಳಿದ್ದು ಸದನದಲ್ಲಿ ಕೆಲಕಾಲ ಚರ್ಚೆಗೆ ಗ್ರಾಸವಾಯಿತು.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ರಾಜಕಾಲುವೆ ಒತ್ತುವರಿ ವಿಚಾರ ಪ್ರಸ್ತಾಪಿಸುತ್ತಾ, ರಾಜಕಾಲುವೆ ಒತ್ತುವರಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿ ಸುದೀರ್ಘವಾಗಿ ಹಲವು ಮಾಹಿತಿಗಳನ್ನು ನೀಡುವ ಮೂಲಕ ಗಮನ ಸೆಳೆದರು. ಈ ವೇಳೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ಕೃಷ್ಣಬೈರೇಗೌಡ ಪ್ರಶ್ನೆ ಕೇಳಿದರೆ ಒಂದು ದೊಡ್ಡ ರಾಜಕೀಯ ಭಾಷಣ ಆಗಲೇಬೇಕು. ಇದು ನಿರೀಕ್ಷಿತ' ಎಂದು ಕಾಲೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ‘ನಾನು ಎಷ್ಟೇ ಆದರೂ ಕಾಲ ಕಾಲಕ್ಕೆ ನಿಮ್ಮ ಮಾರ್ಗದರ್ಶನ ಪಡೆದೇ ರಾಜಕೀಯವಾಗಿ ಹೆಜ್ಜೆ ಇಟ್ಟಿದ್ದು. ಇಲ್ಲಾ ನೀವು ಹೇಳಿ, ನನಗೆ ನೀವು ಮಾರ್ಗದರ್ಶನ ಮಾಡಿಲ್ಲ ಅಂತ ಎಂದು ಹೇಳಿ. ನಾನು ಕೃಷಿ ಸಚಿವನಾಗಿದ್ದ ವೇಳೆ ನೀವು ಹೀಗೀಗೆ ಮಾಡಬೇಕೆಂದು ಸಲಹೆ ನೀಡಿಲ್ಲವೇ? ಎಂದು ಸಿಎಂಗೆ ಸವಾಲು ಹಾಕಿದರು.
ಬಳಿಕ ಒಪ್ಪಿಕೊಂಡ ಬಸವರಾಜ ಬೊಮ್ಮಾಯಿ, ‘ನೀವು ಈಗ ದೊಡ್ಡವರಿದ್ದೀರಿ, ನಾವು ಹೇಗೆ ಮಾರ್ಗದರ್ಶನ ಮಾಡಲು ಸಾಧ್ಯ. ಕೆಲ ಸಂದರ್ಭಗಳಲ್ಲಿ ಸಲಹೆ ನೀಡಿರಬಹುದು' ಎಂದು ಕೆಲಕಾಲ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.