ವಿರಾಜಪೇಟೆ: ಹಸುಗಳನ್ನು ಬಲಿ ಪಡೆದ ಹುಲಿ ಸೆರೆಗೆ 4 ಸಾಕಾನೆಗಳೊಂದಿಗೆ ಕಾರ್ಯಾಚರಣೆಗಿಳಿದ ಅರಣ್ಯ ಅಧಿಕಾರಿಗಳು

Update: 2022-09-13 14:29 GMT

ಮಡಿಕೇರಿ ಸೆ.13 : ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾ.ಪಂ  ವ್ಯಾಪ್ತಿಯ ಬಾಡಗ-ಬಾಣಂಗಾಲ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. 

ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರ ಕಣ್ಣಿಗೆ ಬೀಳುತ್ತಿರುವ ಹುಲಿ ಹಾಡಹಗಲೇ ಹಸುಗಳನ್ನು ಕೊಂದು ಭೀತಿ ಹುಟ್ಟಿಸಿತ್ತು. ರವಿವಾರ ಗ್ರಾಮದ ಪ್ರೇಮ ಪೂವಪ್ಪ ಎಂಬುವವರ ಹಸುವಿನ ಮೇಲೆ ದಾಳಿ ನಡೆಸಿ ಜೀವ ತೆಗೆದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹುಲಿ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ, ಈಶ್ವರ, ಇಂದ್ರ, ಮತ್ತು ಅಂಜನಾ ಹೆಸರಿನ 4 ಸಾಕಾನೆಗಳೊಂದಿಗೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದರು. ಸುಮಾರು 40ಕ್ಕೂ ಅಧಿಕ ಮಂದಿ ಬಾಡಗ, ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ, ಮೊಳಗು ಮನೆ ಕಾಫಿ ತೋಟ ಸೇರಿದಂತೆ ವಿವಿಧೆಡೆ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದರು, ಆದರೆ ಹುಲಿ ಪತ್ತೆಯಾಗಿಲ್ಲ.

► 10 ಸಿಸಿ ಕ್ಯಾಮರಾ :::

ಹುಲಿಯ ಚಲನವಲನದ ಮೇಲೆ ಕಣ್ಣಿಡಲು ಕಾಫಿ ತೋಟದಲ್ಲಿ 10 ಸಿ.ಸಿ ಕ್ಯಾಮರಾಗಳನ್ನು ಇಡಲಾಗಿದ್ದು, ಎರಡು ಬೋನ್‍ಗಳನ್ನು ಅಳವಡಿಸಲಾಗಿದೆ. ಸಿ.ಸಿ ಕ್ಯಾಮರಾದಲ್ಲಿ ಹುಲಿ ಸಂಚಾರದ ದೃಶ್ಯ ಸೆರೆಯಾಗಿದೆ. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ತಾಲೂಕು ಡಿಸಿಎಫ್ ಶಿವರಾಂ, ಎ.ಸಿ.ಎಫ್ ಉಮಾಶಂಕರ್, ಅರಣ್ಯಾಧಿಕಾರಿಗಳಾದ ಅಶೋಕ್, ಶ್ರೀನಿವಾಸ್ ರಂಜನ್, ವನ್ಯಜೀವಿ ವೈದ್ಯಾಧಿಕಾರಿಗಳು ಹಾಗೂ ಶೂಟರ್ ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 

► ಹಸುವಿನ ಮೃತ ದೇಹ ಪತ್ತೆ

 ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗಟ್ಟದಳ್ಳ ನಿವಾಸಿ ಜಯಚಂದ್ರ ಎಂಬುವವರಿಗೆ ಸೇರಿರುವ  ಹಸು  ಕಾರ್ಯಾಚರಣೆ ವೇಳೆ  ಮೃತದೇಹ ಸಿಕ್ಕಿದ್ದು, ಇದೇ ಪ್ರದೇಶಕ್ಕೆ ಮತ್ತೆ ಹುಲಿ ಬರಬಹುದೆಂದು ಸತ್ತ ಹಸುವನ್ನು ಅಲ್ಲೇ ಬಿಡಲಾಗಿದೆ.

ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಹುಲಿ ಕಾರ್ಯಾಚರಣೆ ಬಿರುಸುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News