ಸದನದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು 'ಕಬಡ್ಡಿ ಆಟ, ಆಪರೇಷನ್ ಕಮಲ'

Update: 2022-09-13 13:20 GMT

ಬೆಂಗಳೂರು, ಸೆ. 13: ‘ಕಬಡ್ಡಿ ಆಟ ಆಟವಾಡುತ್ತಿದ್ದುದೆ ‘ಆಪರೇಷನ್ ಕಮಲ'ದ ವೇಳೆ ಶಾಸಕರನ್ನು ಕ್ಯಾಚ್ ಹಾಕಿಕೊಳ್ಳಲು ನಿಮಗೆ ಅನುಕೂಲ ಆಯಿತು' ಎಂದು ಕಾಂಗ್ರೆಸ್ ಸದಸ್ಯ ತನ್ವೀರ್ ಸೇಠ್ ಹೇಳಿದ್ದು ಸದನದ ಕಲಾಪದಲ್ಲಿ ಹಾಸ್ಯಕ್ಕೆ ಕಾರಣವಾಯಿತು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಮಳೆ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ಸಚಿವ ಆರ್. ಅಶೋಕ್ ಅವರನ್ನು ಕುರಿತು ‘ಅಶೋಕ್ ನೀನು ಕಬಡ್ಡಿ ಆಡ್ತಿದ್ದೆ ಅಲ್ವಾ?’ ಎಂದು ಪ್ರಶ್ನಿಸಿದ್ದು ಕಲಾಪದಲ್ಲಿ ಕೆಲಕಾಲ ಸ್ವಾರಸ್ಯಕರ ಮಾತುಕತೆಗೆ ಅನುವು ನೀಡಿತು.

‘ರಾಜ್ಯದಲ್ಲಿ ಮಳೆ-ನೆರೆಯಿಂದ 122 ಮಂದಿ ಪ್ರಾಣ ಕಳೆದುಕೊಂಡಿದ್ದು, ಒಟ್ಟು 24 ಸಾವಿರಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದು, 10ರಿಂದ 12 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. 7,647 ಕೋಟಿ ರೂ.ನಷ್ಟ ಸಂಭವಿಸಿದೆ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, 1,012 ಕೋಟಿ ರೂ.ಕೇಂದ್ರದಿಂದ ಪರಿಹಾರ ಕೇಳಿದ್ದೀರಿ. ಆದರೆ, ಅವರು ಈವರೆಗೂ ಒಂದು ನಯಾಪೈಸೆ ಹಣ ನೀಡಿಲ್ಲ' ಎಂದು ಸಿದ್ದರಾಮಯ್ಯ ದೂರಿದರು. 

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಅಶೋಕ್ ಎದ್ದು ನಿಂತು ಉತ್ತರಿಸಲು ಮುಂದಾದರು. ‘ಅಶೋಕ್ ಪದೇ ಪದೆ ಎದ್ದು ನಿಲ್ಲಬೇಡಿ, ಏಕೆ ಎಕ್ಸಸೈಜ್ ಮಾಡ್ತೀರಾ? ನಿನ್ನ ಎನರ್ಜಿ ಚೆನ್ನಾಗಿ ಇದೆ. ನೀನು ದೈಹಿಕವಾಗಿ ಗಟ್ಟಿ ಮುಟ್ಟಾಗಿದ್ದೀಯಾ, ನೀನು ಕಬಡ್ಡಿ ಆಡ್ತಿದ್ದೆ ಅಲ್ವಾ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ಹೌದು ಸಾರ್ ಇಪ್ಪತ್ತು ವರ್ಷದವನಿದ್ದ ವೇಳೆ ಕಬಡಿ ಆಡಿದ್ದೇನೆ' ಎಂದರು.

ಇದನ್ನೂ ಓದಿ: ಬಿಜೆಪಿ ಸರ್ಕಾರದ ರಸ್ತೆ ಡಾಂಬಾರಿಗಿಂತ ರೊಟ್ಟಿಗೆ ಕಲಸುವ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್: ಕಾಂಗ್ರೆಸ್

‘ನಾನು ಹೈಸ್ಕೂಲ್ ದಿನದಲ್ಲಿ ಆಡುತ್ತಿದ್ದೆ. ಆಮೇಲೆ ಬಿಟ್ಟೆ. ಆಮೇಲೆ ಆಡೋಕೆ ಆಗ್ಲೆ ಇಲ್ಲ. ಈಗ ಯಾವ ಆಟ ಆಡೋಕು ಆಗೋದಿಲ್ಲ' ಎಂದು ಸಿದ್ದರಾಮಯ್ಯ, ಅಶೋಕ್‍ಗೆ ಪ್ರತಿಕ್ರಿಯಿಸಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ತನ್ವಿರ್ ಸೇಠ್, ‘ಆಗ ಕಬಡ್ಡಿ ಆಡುತ್ತಿದ್ದರಿಂದಲೇ ಇವರು(ಬಿಜೆಪಿ) ಆಪರೇಷನ್ ಕಮಲ ಮಾಡಲು, ಕ್ಯಾಚ್ ಹಾಕಿಕೊಳ್ಳಲು ಅನುಕೂಲ ಆಗಿದ್ದು ಎಂದರು. ‘ಹೌದು ಕ್ಯಾಚ್ ಹಿಡಿಯಲು ಸಾಧ್ಯವಾಯಿತು. ಕಬ್ಬಡಿ ಆಡಿದರೆ ಶುಗರ್, ಬಿಪಿ ಬರುವುದಿಲ್ಲ ಸರ್' ಎಂದು ಅಶೋಕ್ ಉತ್ತರಿಸಿದ್ದು ಸದನದಲ್ಲಿ ಹಾಸ್ಯಕ್ಕೆ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News