ಹೆಚ್‍ಐವಿ ಬಾಧಿತರಿಗೆ 70 ಕೋಟಿ ರೂ. ಬಿಡುಗಡೆ: ಸಚಿವ ಹಾಲಪ್ಪ ಆಚಾರ್

Update: 2022-09-13 13:32 GMT

ಬೆಂಗಳೂರು, ಸೆ.13: ರಾಜ್ಯದಲ್ಲಿ ಇರುವ ಎಚ್‍ಐವಿ ಬಾಧಿತ ಮಕ್ಕಳು ಮತ್ತು ವಯಸ್ಕರಿಗಾಗಿ ಕಳೆದ 5 ವರ್ಷಗಳಲ್ಲಿ ವಿಶೇಷ ಪಾಲನಾ ಯೋಜನೆಯಡಿ 70 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.  

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 18 ವರ್ಷದೊಳಗಿನ 12,590 ಹೆಚ್‍ಐವಿ ಬಾಧಿತರಿದ್ದಾರೆ. ಈ ಪೈಕಿ 3,102 ಪೀಡಿತ ಮಕ್ಕಳು ಹಾಗೂ 9,488 ಬಾಧಿತ ವಯಸ್ಕರಿದ್ದಾರೆ ಎಂದು ತಿಳಿಸಿದರು. 

ಕಳೆದ ನಾಲ್ಕು ವರ್ಷಗಳಿಂದ ಪ್ರತಿವರ್ಷ 15 ಕೋಟಿ ರೂ. ನೀಡಲಾಗುತ್ತಿದ್ದು, 2021-22ನೆ ಸಾಲಿನಲ್ಲಿ ಈ ಮೊತ್ತವನ್ನು 20 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಹೆಚ್‍ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಪಾಲನೆ ಮತ್ತು ಪೋಷಣೆಯನ್ನು ಸರಕಾರವೇ ನೋಡಿಕೊಳ್ಳುತ್ತದೆ. ಹೀಗಾಗಿ, ಖಾಸಗಿ ಸಂಸ್ಥೆಗಳಿಗೆ ವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು. 

ಹೆಚ್‍ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ವೈದ್ಯಕೀಯ, ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಲು 18 ವರ್ಷ ತುಂಬುವ ತನಕ ಪ್ರತಿ ಮಗುವಿಗೂ ಪ್ರತಿ ತಿಂಗಳ ತಲಾ 1 ಸಾವಿರ ರೂ. ನೀಡಲಾಗುವುದು. ಅಲ್ಲದೆ, ಹೆಚ್‍ಐವಿ ಪೀಡಿತ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂಬ ಕಾರಣಕ್ಕಾಗಿ ವಿಶೇಷ ಪಾಲನೆ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು. 

ಹೆಚ್‍ಐವಿ ಪೀಡಿತ ಮಹಿಳೆಯರಿಗೆ 40 ಸಾವಿರ ರೂ.ಗಳವರೆಗೂ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಅನುವು ಮಾಡಿಕೊಡಲಾಗುತ್ತಿದೆ. 22.20 ಕೋಟಿ ರೂ. ಅನುದಾನ ವಿಶೇಷ ಚೇತನ ಫಲಾನುಭವಿಗಳಿಗೆ 2021-22ನೆ ಸಾಲಿನಲ್ಲಿ 22.20 ಕೋಟಿ ರೂ. ವೆಚ್ಚದಲ್ಲಿ 8435 ಫಲಾನುಭವಿಗಳಿಗೆ 8681 ಸಾಧನ ಸಲಕರಣೆ ವಿತರಿಸಲಾಗಿದೆ ಎಂದು ಸಚಿವ ಆಚಾರ್ ಹಾಲಪ್ಪ ತಿಳಿಸಿದರು. ಬಿಜೆಪಿ ಸದಸ್ಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆ, ಲ್ಯಾಪ್‍ಟ್ಯಾಪ್, ಯಂತ್ರಚಾಲಿತ ದ್ವಿಚಕ್ರ ವಾಹನ, ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕೆ ಹೊಲಿಗೆ ಯಂತ್ರ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News