ಸಿದ್ದರಾಮಯ್ಯ ವಿರುದ್ಧ ಹೇಳಿಕೆ ವಿಚಾರ: ಶಾಸಕ ಸಿ.ಟಿ.ರವಿ ಭಾವಚಿತ್ರ ಸುಟ್ಟು ಆಕ್ರೋಶ, ಪ್ರತಿಭಟನೆ

Update: 2022-09-13 14:09 GMT

ಮೈಸೂರು,ಸೆ.13: ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಅವರ ಭಾವಚಿತ್ರವನ್ನು ಸುಟ್ಟು ಹಾಕುವ ಮೂಲಕ ಅಖಿಲ ಕರ್ನಾಟಕ ಸಿದ್ದರಾಮಯ್ಯ (Siddaramaiah) ಅಭಿಮಾನಿ ಬಳಗದವರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಎದುರು ಮಂಗಳವಾರ ಸಿದ್ದರಾಮಯ್ಯ ಅಭಿಮಾನಿಗಳ ಬಳಗ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ವಕೀಲರ ತಂಡ ಪ್ರತಿಭಟನೆ ನಡೆಸಿ ಶಾಸಕ ಸಿ.ಟಿ.ರವಿ ವಿರುದ್ಧ ಧಿಕ್ಕಾರ ಕೂಗಿ ಸಿದ್ದರಾಮಯ್ಯ ಅವರ ಕ್ಷಮೆ ಕೋರುವಂತೆ ಒತ್ತಾಯಿಸಿದರು.

'ಶಾಸಕ ಸಿ.ಟಿ.ರವಿ ಒಬ್ಬ ಕುಡುಕ, ಇವರು ಕುಡಿದು ಕಾರು ಚಾಲನೆ ಮಾಡಿ ಇಬ್ಬರನ್ನು ಕೊಂದಿದ್ದಾರೆ. ಇಂತಹ ವ್ಯಕ್ತಿಗೆ ಸಿದ್ಧರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಮತ್ತು ನೈತಿಕತೆ ಇಲ್ಲ, ಸಿದ್ಧರಾಮಯ್ಯ ಅವರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವ ಇವರನ್ನು ಕೂಡಲೇ ವಜಾಗೊಳಿಸಬೇಕು' ಎಂದು ಆಗ್ರಹಿಸಿದರು.

ಇದೇ ವೇಳೆ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಮಾತನಾಡಿ ರಾಜ್ಯದ ಧೀಮಂತ ನಾಯಕ ಸಿದ್ಧರಾಮಯ್ಯ ಅವರ ಬಗ್ಗೆ  ಶಾಸಕ ಸಿ.ಟಿ.ರವಿ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ತಮ್ಮ ಸಂಸ್ಕೃತಿಯನ್ನು ಹೊರ ಹಾಕಿದ್ದಾರೆ. ಅವರು ಕೂಡಲೇ ಸಿದ್ಧರಾಮಯ್ಯ ಅವರ ಕ್ಷಮೆಯನ್ನು ಕೋರಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮತ್ತೊಂದೆಡೆ ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಪುರಭನದ ಬಳಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಸಕ ಸಿ.ಟಿ.ರವಿ ಭಾವಚಿತ್ರವನ್ನು ಸುಡಲು ಯತ್ನಿಸಿದರಾದರಾದೂ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಇದೇ ವೇಳೆ ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್, ವಕೀಲ ಹಾಗೂ ನಗರಸಭಾ ಸದಸ್ಯ ಎಸ್.ಪಿ.ಮಹೇಶ್, ವಕೀಲ ಪ್ರೇಮ್ ಮಾತನಾಡಿದರು. ಪ್ರತಿಭಟನೆಯಲ್ಲಿ ಡೈರಿ ವೆಂಕಟೇಶ್, ಶಿವು, ಮಂಜುನಾಥ್, ಕಿರಣ್ ಬ್ರಾಡ್‍ವೇ, ಪವನ್ ಸಿದ್ಧರಾಮು, ಹಣಸೂರು ಬಸವಣ್ಣ, ಮಹೇಶ್, ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಡಿ.ನಾಗಭೂಷಣ,  ಎನ್.ಆರ್.ನಾಗೇಶ, ಎಚ್.ಎಸ್.ಪ್ರಕಾಶ್, ಸಿ.ಟಿ.ಆಚಾರ್ಯ, ರವಿನಂದನ್, ಯೋಗೇಶ್ ಉಪ್ಪಾರ, ಲೋಕೇಶ್ ಕುಮಾರ್ ಮಾದಾಪುರ, ಮಹೇಂದ್ರ, ಆರ್.ಕೆ.ರವಿ, ರವಿ ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರೋಧ ಪಕ್ಷದ ನಾಯಕ ಸಿದ್ದರಾಮ್ಮಯ್ಯ ಅವರನ್ನು ಅತ್ಯಂತ ಕೀಳು ಪದಗಳಲ್ಲಿ ನಿಂದಿಸಿರುವುದು ಶೋಷಿತ ಸಮಾಜಗಳಿಗೆ ನೋವುಂಟುಮಾಡಿದೆ. ಮುಂದಿನ ದಿನಗಳಲ್ಲಿ ಈ ಸಮಾಜಗಳು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತವೆ. ನಿಮ್ಮ ಮಾತುಗಳು ಸಂಸ್ಕೃತಿ ಹೀನವಾಗಿವೆ. ಸಿ.ಟಿ.ರವಿ ಕೂಡಲೇ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಮೈಸೂರಿಗೆ ಬಂದಾಗ ನಿಮಗೆ ಕಪ್ಪು ಬಾವುಟ ಪ್ರದರ್ಶಿಸಿ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಕಾಗುತ್ತದೆ.

 -ಕೆ.ಎಸ್.ಶಿವರಾಮ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News