ಗುರು ರಾಘವೇಂದ್ರ ಬ್ಯಾಂಕ್‍ ಹಗರಣ | 1,115 ಕೋಟಿ ರೂ. ಆಸ್ತಿ ಜಪ್ತಿ: ಸಚಿವ ಎಸ್.ಟಿ.ಸೋಮಶೇಖರ್

Update: 2022-09-13 16:01 GMT

ಬೆಂಗಳೂರು, ಸೆ.13: ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನಲ್ಲಿ ಸಾಲ ಪಡೆದು ಪರಾರಿಯಾಗಿರುವ ಸುಸ್ತಿದಾರರು ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿದ್ದ 1,115 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಕಾಂಗ್ರೆಸ್‍ನ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಠೇವಣಿದಾರರ ಹಣ ಹಿಂದುರಿಗಿಸಲು ಸಹಕಾರ ಇಲಾಖೆ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಅದೇ ರೀತಿ, ಬ್ಯಾಂಕ್‍ನಲ್ಲಿ ಅತಿಹೆಚ್ಚು ಸಾಲ ಪಡೆದ ಜಶ್ತಂ ರೆಡ್ಡಿ ಮತ್ತು ರಂಜಿತ್ ರೆಡ್ಡಿ ಎಂಬಿಬ್ಬರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐಗೆ ಕೋರಲಾಗಿದೆ ಎಂದರು.

ಜತೆಗೆ ಅತಿಹೆಚ್ಚು ಸಾಲ ಮಾಡಿದ 24 ಮಂದಿಯ ಪಟ್ಟಿ ಸಿದ್ಧಪಡಿಸಲಾಗಿದೆ. ಹೀಗೆ ಸಾಲ ಪಡೆದು ಮರುಪಾವತಿಸದವರ ಹಾಗೂ ಅವರ ಸಂಬಂಧಿಕರಿಂದ 1,115 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಈಡಿ ಮತ್ತು ಸಿಐಡಿ ಪ್ರತ್ಯೇಕವಾಗಿ ಪ್ರಕರಣದ ತನಿಖೆ ನಡೆಸುತ್ತಿವೆ. ಠೇವಣಿದಾರರಿಗೆ ಹಣ ವಾಪಾಸು ನೀಡುವ ಕುರಿತು ಸಹಕಾರ ಇಲಾಖೆ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News