ಕಡಿಮೆ ವಿದ್ಯಾರ್ಹತೆಯ ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದುಹಾಕಲ್ಲ: ಸಚಿವ ಹಾಲಪ್ಪ ಆಚಾರ್

Update: 2022-09-13 16:37 GMT

ಬೆಂಗಳೂರು, ಸೆ.13: 'ಯಾವುದೇ ಹಂತದಲ್ಲಿಯೂ ಕಡಿಮೆ ವಿದ್ಯಾರ್ಹತೆಯ ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದುಹಾಕಲ್ಲ  ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. 

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಗೋವಿದರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,  ರಾಜ್ಯದ 66,361 ಅಂಗನವಾಡಿಗಳ ಪೈಕಿ 20 ಸಾವಿರ ಅಂಗನವಾಡಿಗಳಲ್ಲಿ ಪಿಯುಸಿವರೆಗೂ ಕಲಿತವರಿದ್ದಾರೆ. ಎಸೆಸೆಲ್ಸಿ ಕಲಿತವರಿಗೆ ಅಗತ್ಯ ತರಬೇತಿ ನೀಡಲಾಗುವುದು. ಇನ್ನುಳಿದ ಅಂಗನವಾಡಿ ಕೇಂದ್ರಗಳಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಕಡಿಮೆ ವಿದ್ಯಾರ್ಹತೆ ಹೊಂದಿದ್ದು, ಅವರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಆ ಕೇಂದ್ರಗಳಲ್ಲೂ ನೂತನ ಪಠ್ಯಕ್ರಮ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಸಂಧರ್ಭದಲ್ಲಿ 6 ತಿಂಗಳಿನಿಂದ 1 ವರ್ಷದವರೆಗೂ ಡಿಪ್ಲಮೋ ತರಬೇತಿ ನೀಡಲು ಯೋಜಿಸಲಾಗಿದೆ. ಯಾವುದೇ ಹಂತದಲ್ಲಿಯೂ ಅವರನ್ನ ಕೆಲಸದಿಂದ ತಗೆಯುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

'ಎನ್‍ಇಪಿ ಜಾರಿ':  

​'ಪ್ರಸಕ್ತ ಸಾಲಿನಲ್ಲಿ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಯ ಪಠ್ಯಕ್ರಮಗಳನ್ನು ಜಾರಿ ಮಾಡಲಾಗುವುದು. ನೂತನ ಶಿಕ್ಷಣ ನೀತಿಯನ್ವಯ ಶಾಲಾ ಪೂರ್ವ ಶಿಕ್ಷಣಕ್ಕೆ ಪಠ್ಯಕ್ರಮ ರೂಪಿಸಲು ಈಗಾಗಲೇ ಆರು ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿಗಳ ಶಿಫಾರಸು ಆಧರಿಸಿ ಪಠ್ಯಕ್ರಮ ಸೇರಿ ಇತರ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಸದರಿ ಪಠ್ಯ ಕ್ರಮ ಬೋಧನೆಗಾಗಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಲಾಗುವುದು' ಎಂದು ಸಚಿವರು ತಿಳಿಸಿದರು. 

ರಾಜ್ಯದ ಅಂಗನವಾಡಿಗಳ ಮೂಲ ಸೌಲಭ್ಯ ಅಭಿವೃದ್ಧಿಗೆ ಹಲವು ಯೋಜನೆಗಳ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ. ಬಜೆಟ್‍ನಲ್ಲಿ 1,877 ಹೊಸ ಅಂಗನವಾಡಿ ಕಟ್ಟಡಗಳನ್ನು ಘೋಷಿಸಲಾಗಿದೆ. ಸಿಎಂ ಬೊಮ್ಮಾಯಿ ಅವರು 4,780 ಹೊಸ ಅಂಗನವಾಡಿಗಳನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News