2 ವರ್ಷ ವಿನಾಯಿತಿ ಖಾಸಗಿ ಶಾಲಾ ಶಿಕ್ಷಕರಿಗೂ ಅನ್ವಯ: ಸಚಿವ ಬಿ.ಸಿ.ನಾಗೇಶ್

Update: 2022-09-13 17:11 GMT

ಬೆಂಗಳೂರು, ಸೆ.13: ಸರಕಾರಿ ಶಾಲೆಯ 6ರಿಂದ 8ನೆ ತರಗತಿಗೆ ಪದವೀಧರ ಶಿಕ್ಷಕರ ನೇಮಕಾತಿ ವಯೋಮಿತಿಯಲ್ಲಿ 2 ವರ್ಷ ವಿನಾಯಿತಿ ನೀಡಿದ ನಿಯಮ ಖಾಸಗಿ ಶಾಲೆಗಳ ಶಿಕ್ಷಕರಿಗೂ ಅನ್ವಯ ಮಾಡುವ ಕುರಿತು ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್ತು ಕಲಾಪದ ವೇಳೆ ಬಿಜೆಪಿಯ ಬಸವರಾಜ ಹೊರಟ್ಟಿ ನಿಯಮ 330ರ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿ 6ರಿಂದ 8ನೆ ತರಗತಿ ಬೋಧನೆಗೆ ನೇಮಕವಾಗುವ ಶಿಕ್ಷಕರ ವಯೋಮಿತಿಯಲ್ಲಿ 2 ವರ್ಷ ವಿನಾಯಿತಿ ನೀಡಲಾಗಿದೆ ಎಂದರು.

ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕವಾಗುವ ಎಲ್ಲ ವರ್ಗದವರಿಗೂ ಇದು ಅನ್ವಯವಾಗಲಿದೆ. ಇದೇ ನಿಯಮವನ್ನು ಅನುದಾನಿತ ಖಾಸಗಿ ಶಾಲೆಗಳಿಗೂ ಅನ್ವಯ ಮಾಡುವಂತೆ ಶಾಸಕರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಇಲಾಖೆ ಯಾವುದೇ ಹಳೇ ಶಾಲೆಗಳಿಗೆ ಸುಪ್ರೀಂಕೋರ್ಟ್ ಆದೇಶ ಅನ್ವಯ ಮಾಡುವಂತೆ ಒತ್ತಡ ಹೇರುತ್ತಿಲ್ಲ. ಅದರ ಬದಲಾಗಿ ಅಫಿಡವಿಟ್ ಸಲ್ಲಿಸುವಂತೆ ಮಾತ್ರ ಸೂಚಿಸಲಾಗುತ್ತಿದೆ. ಈ ಕುರಿತು ಈಗಾಗಲೆ 8 ಬಾರಿ ಸಮಯ ವಿಸ್ತರಿಸಲಾಗಿದೆ. ಆದರೂ, ಅನೇಕ ಅನುದಾನಿತ ಖಾಸಗಿ ಶಾಲೆಗಳು ಅಫಿಡವಿಟ್ ಸಲ್ಲಿಕೆ ಮಾಡದೆ ಮೊಂಡುತನ ತೋರುತ್ತಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News