ಮಡಿಕೇರಿ ಎಸ್‍ಪಿ ಕಚೇರಿಗೆ ಮುತ್ತಿಗೆ, ಶಾಸಕರ ಮನೆ ಮುಂದೆ ಪ್ರತಿಭಟನೆಯೂ ಮಾಡ್ತೀವಿ: ಎಂ.ಲಕ್ಷ್ಮಣ್

Update: 2022-09-14 11:25 GMT

ಮಡಿಕೇರಿ ಸೆ.14 : ಕೊಡಗು (Kodagu) ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಎಸ್‍ಪಿ ಕಚೇರಿಗೆ ಮುತ್ತಿಗೆ ಹಾಕುವುದು ಖಚಿತ, ಮಾತ್ರವಲ್ಲ ಶಾಸಕರ ಮನೆ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಲಕ್ಷ್ಮಣ್ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ವಿಧಾನಸಭಾ ಅಧಿವೇಶನದ ನಂತರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಇಡೀ ದೇಶದಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಕೊಡಗಿನ ಗೌರವ ಮತ್ತು ಸಂಸ್ಕೃತಿಗೆ ದಕ್ಕೆ ತರುವ ಕೆಲಸವನ್ನು ಶಾಸಕರು ಮಾಡಿದ್ದಾರೆ. ಇದರಿಂದ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಆರೋಪಿಸಿದ ಅವರು, ಎಸ್‍ಪಿ ಕಚೇರಿಗೆ ಮಾತ್ರವಲ್ಲ ಶಾಸಕರ ಮನೆಗಳಿಗೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಕೊಡಗು ಜಿಲ್ಲೆ ಶಾಸಕರ ಆಸ್ತಿಯಲ್ಲ, ಕಳೆದ 25 ವರ್ಷಗಳ ಸಾಧನೆ ಬಗ್ಗೆ ಶಾಸಕರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರನ್ನು ಕಂಡರೆ ಬಿಜೆಪಿ ಮಂದಿಗೆ ಭಯ ಇರುವುದರಿಂದಲೇ ಜನೋತ್ಸವ ಹೆಸರಿನ ಕಾರ್ಯಕ್ರಮದಲ್ಲಿ ನಿರಂತರವಾಗಿ ಟೀಕಿಸುವ ಕೆಲಸವನ್ನು ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರುಗಳು ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. 

''ಎರಡೂ ಕ್ಷೇತ್ರ ಗೆಲ್ಲುತ್ತೇವೆ'' 

ಮೊಟ್ಟೆ ಎಸೆದ ಪ್ರಕರಣದ ಹಿನ್ನೆಲೆ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ  ಗಂಭೀರವಾಗಿ ಪರಿಗಣಿಸಿದ್ದು, ಗೆಲ್ಲುವ ಗುರಿ ಹೊಂದಿದ್ದೇವೆ. ಕಾಂಗ್ರೆಸ್ ಮುಖಂಡರುಗಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರುಗಳನ್ನು ಕೊಡಗು ಜಿಲ್ಲೆಗೆ ಕರೆಸಲಾಗುವುದು. ಅಭೂತಪೂರ್ವ ವಿಜಯದ ಮೂಲಕ ಬಿಜೆಪಿಯನ್ನು ಕಿಕ್ ಔಟ್ ಮಾಡಲಾಗುವುದು ಎಂದು ಲಕ್ಷ್ಮಣ್ ಹೇಳಿದರು.

ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಬಿಜೆಪಿ ಸಂವಿಧಾನದ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟುಕೊಂಡಿಲ್ಲ, ಸಂವಿಧಾನವನ್ನು ಕಿತ್ತು ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭ ಮೊಟ್ಟೆ ಎಸೆದ ಪ್ರಕರಣದ ಹಿಂದೆ ಶಾಸಕರ ರಾಜಕೀಯ ಅಡಗಿದೆ. ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವುದಕ್ಕಾಗಿ ಈ ರೀತಿಯ ಕುತಂತ್ರ ಎಸಗಿದ್ದಾರೆ. ಬಿಜೆಪಿಯಿಂದ ಇಂದು ದೇಶಕ್ಕೆ ಕಂಟಕ ಬಂದಿದೆ ಎಂದು ಆರೋಪಿಸಿದರು.

 ಭ್ರಷ್ಟ ವ್ಯವಸ್ಥೆ ವಿರುದ್ಧ ರಾಹುಲ್ ಗಾಂಧಿ ಅವರು ಯಾತ್ರೆ ಹಮ್ಮಿಕೊಂಡಿರುವುದಾಗಿ ಜೀವಿಜಯ ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜಿಲ್ಲಾ ವಕ್ತಾರ ಟಿ.ಈ.ಸುರೇಶ್ ಹಾಗೂ ಸದಸ್ಯ ಗಂಗಾಧರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News