ಹಿಂದಿ ದಿವಸದ ಆಚರಣೆಗೆ ಕಸಾಪ ವಿರೋಧ

Update: 2022-09-14 13:09 GMT
ಡಾ. ಮಹೇಶ ಜೋಶಿ- ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು

ಬೆಂಗಳೂರು, ಸೆ.14: ‘ಹಿಂದಿ ದಿವಸ’ದ ಆಚರಣೆಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿಯವರು ಬಹಳ ಸ್ಪಷ್ಟವಾಗಿ ವಿರೋಧಿಸಿದ್ದಾರೆ. 

1949ರಿಂದ ಆಚರಣೆಯಾಗುತ್ತಿರುವ ‘ಹಿಂದಿ ದಿವಸ’ದ ಆಚರಣೆಯು ಪರೋಕ್ಷವಾಗಿ ಹಿಂದಿ ಹೇರಿಕೆಯ ಪ್ರಯತ್ನವು ಆಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಪಷ್ಟ ನಿಲುವು. ಭಾಷೆ ಎನ್ನುವುದು ಕೇವಲ ಸಂಪರ್ಕ ಸಾಧನ ಮಾತ್ರವಲ್ಲದೆ  ಸಂಸ್ಕೃತಿ ಕೂಡ ಆಗಿದೆ. ‘ಕನ್ನಡ’ ಎನ್ನುವುದನ್ನು ಉಳಿಸಿಕೊಳ್ಳುವುದು ಕೇವಲ ಭಾಷೆಯನ್ನು ಮಾತ್ರ ಉಳಿಸಿಕೊಳ್ಳುವ ಸಂಗತಿಯಾಗದೆ,  ಸಂಸ್ಕೃತಿಯನ್ನು ಕೂಡ ಉಳಿಸಿಕೊಳ್ಳುವ ಪ್ರಯತ್ನ. ಹೊರ ರಾಜ್ಯಗಳಿಂದ ಅದರಲ್ಲಿಯೂ ಉತ್ತರಭಾರತದಿಂದ ಬಂದವರು ಅಗತ್ಯವಾಗಿ ‘ಕನ್ನಡ’ವನ್ನು ಕಲಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡೇ ಭಾರತೀಯರಾಗುವುದು ಸಹಜ ಸಂಗತಿ. ನಮ್ಮ ಭಾಷೆಯ ಕುರಿತು ಪ್ರೀತಿ ಅಭಿಮಾನಗಳನ್ನು ಇಟ್ಟುಕೊಳ್ಳುವುದಕ್ಕೆ  ಅವಕಾಶವಿರಬೇಕು. ‘ಹಿಂದಿ ಸಪ್ತಾಹ’ ‘ಹಿಂದಿ ಪಾಕ್ಷಿಕ್’ ‘ಹಿಂದಿ ಮಾಸ್’ದಂತಹ ಆಚರಣೆಗಳು ಇದಕ್ಕೆ ಧಕ್ಕೆ ತರುವ ಪ್ರಯತ್ನಗಳು. ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ’ ಎನ್ನುವ ಸ್ಪಷ್ಟ ನಿಲುವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಇದಕ್ಕಾಗಿ ಸದಾ ಹೋರಾಡುತ್ತದೆ ಎಂದರು. 

ಹಿಂದಿ ಎನ್ನುವುದು ಕನ್ನಡಿಗರಿಗೆ ಪರಕೀಯ ಭಾಷೆ, ಅದನ್ನು ಕಲಿಯುವಂತೆ ಒತ್ತಾಯಿಸುವುದು ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಪ್ರಯತ್ನ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದಿಗೂ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News