ಕನ್ನಡ ಭಾಷೆಗೆ ಅನ್ಯಾಯ ಆಗುವುದನ್ನು ಸಹಿಸಲು ಸಾಧ್ಯವಿಲ್ಲ: ಜೆಡಿಎಸ್

Update: 2022-09-15 07:22 GMT

ಬೆಂಗಳೂರು, ಸೆ. 14: ‘ಹಿಂದಿ ದಿವಸ್' ಆಚರಣೆ ಮಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯರು, ಕನ್ನಡ ಶಾಲು ಧರಿಸಿ ವಿಧಾನಸಭೆ ಕಲಾಪದಲ್ಲಿ ಹಾಜರಾಗಿದ್ದಲ್ಲದೆ, ‘ಕನ್ನಡ ಭಾಷೆಗೆ ಅನ್ಯಾಯ ಆಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದ ಬಳಿಕ ಎದ್ದು ನಿಂತ ಜೆಡಿಎಸ್ ಸದಸ್ಯ ಅನ್ನದಾನಿ ಸೇರಿದಂತೆ ಇನ್ನಿತರ ಸದಸ್ಯರು, ‘ಕನ್ನಡ ನಾಡಿನಲ್ಲಿ ಹಿಂದಿ ದಿವಸ್ ಆಚರಣೆ ಮೂಲಕ ನಮ್ಮ ಹೆಮ್ಮೆಯ ಕನ್ನಡ ಭಾಷೆ, ಸಂಸ್ಕೃತಿಗೆ ಅನ್ಯಾಯ ಮಾಡಲಾಗುತ್ತಿದೆ. ಅತ್ಯಂತ ಪುರಾತನ ಭಾಷೆಯೂ ಆಗಿರುವ ಕನ್ನಡ ಭಾಷೆಯ ಕಡೆಗಣನೆ ಮಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

ಇದೇನು ಹುಚ್ಚಾಸ್ಪತ್ರೆನೇ: ಏನ್ರೀ ಇದು, ಏನಿದು ಜಾತ್ರೆನಾ? ಸಂತೆನಾ? ನೀವು ನೀವೇ ಎದ್ದು ನಿಂತು ಹುಚ್ಚಾಸ್ಪತ್ರೆಯಲ್ಲಿ ಮಾತನಾಡಿದಂತೆ ಮಾತನಾಡುತ್ತಿದ್ದರೆ ನಾನು ಸದನ ನಡೆಸಲು ಸಾಧ್ಯವೇ? ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರೇ, ನಿಮ್ಮ ಸದಸ್ಯರಿಗೆ ನೀವೇ ಬುದ್ಧಿ ಹೇಳಿಬಿಡಿ' ಎಂದು ಸ್ಪೀಕರ್ ಕಾಗೇರಿ, ಸದಸ್ಯರ ವರ್ತನೆಗೆ ಆಕ್ರೋಶ ಹೊರಹಾಕಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ‘ನಮ್ಮ ಸದಸ್ಯರು ಸದನದಲ್ಲಿ ನಿಮ್ಮ ಗಮನ ಸೆಳೆಯಲು ಮುಂದಾಗಿದ್ದಾರೆ. ಸದನದ ಕಲಾಪಕ್ಕೆ ಅಡ್ಡಿಪಡಿಸುವ ಉದ್ದೇಶ ಖಂಡಿತ ಇಲ್ಲ. ನಮ್ಮ ಪಕ್ಷದ ನಿಲುವು ದೇಶದಲ್ಲಿ 56ಕ್ಕೂ ಹೆಚ್ಚು ಭಾಷೆಗಳು ಇವೆ. ಆದರೆ, ಇತ್ತೀಚಿನ ದಿನಗಳಲ್ಲಿ ‘ಒಂದು ರಾಷ್ಟ್ರ ಒಂದು ಭಾಷೆ' ಎಂಬ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಭಾಷೆಯ ಬಗ್ಗೆ ಆಯಾ ರಾಜ್ಯಗಳಲ್ಲಿ ಅವರದ್ದೇ ಆದ ಭಾವನಾತ್ಮಕ ಸಂಬಂಧವಿದೆ. ಬಲವಂತವಾಗಿ ಭಾಷೆಯ ಕತ್ತು ಹಿಸುಕುವ ಕೆಲಸ ಆಗಬಾರದು' ಎಂದು ವಿವರಣೆ ನೀಡಿದರು.

ಕಡ್ಡಾಯಗೊಳಿಸಲು ಕಾನೂನು: ‘ಕನ್ನಡ ಭಾಷೆಯನ್ನು ರಕ್ಷಿಸಿ ಹಾಗೂ ಬೆಳೆಸಲು ನಮ್ಮ ಸರಕಾರ ಬದ್ಧವಾಗಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ಪಕ್ಷ ಹಾಗೂ ಸರಕಾರ ಎಂದಿಗೂ ರಾಜಕೀಯದ ಹೊರತಾಗಿ ಚಿಂತಿಸುತ್ತದೆ. ಕನ್ನಡದ ಬಳಕೆಯನ್ನು ಹೆಚ್ಚಿಸಲು ಕನ್ನಡವನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸುವ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲಿದ್ದೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದರು.

‘ಭಾರತ ವಿವಿಧ ಭಾಷೆಗಳ ಒಕ್ಕೂಟ. ಇಲ್ಲಿ ಯಾವುದೇ ಒಂದು ಭಾಷೆ ಹೇರಿಕೆಗೆ ಅವಕಾಶವಿಲ್ಲ. ನಾವು ಕನ್ನಡದ ಪರ ಇದ್ದೇನೆ. ಕನ್ನಡದ ವಿಚಾರದಲ್ಲಿ ರಾಜೀ ಪ್ರಶ್ನೆಯೆ ಇಲ್ಲ. ಕನ್ನಡ ಅಗ್ರಮಾನ್ಯ ಭಾಷೆ. ಇದರ ಜೊತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಯಲ್ಲಿ ವೃತ್ತಿ ಶಿಕ್ಷಣವನ್ನು ಕನ್ನಡದಲ್ಲೇ ಕಲಿಕೆ ಆರಂಭಿಸಲಾಗಿದೆ. ಎಂಜಿನಿಯರಿಂಗ್ ಕನ್ನಡದಲ್ಲೆ ಬೋಧನೆ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ' ಎಂದು ಅವರು ವಿವರಣೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News