ಕಿರುತೆರೆ ನಟ ರವಿಪ್ರಸಾದ್ ನಿಧನ

Update: 2022-09-14 14:59 GMT
 ರವಿಪ್ರಸಾದ್ 

ಮಂಡ್ಯ, ಸೆ.14:  ಟಿ.ಎನ್.ಸೀತಾರಾಂ ಅವರ ಮುಕ್ತ ಮುಕ್ತ, ಮಗಳು ಜಾನಕಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಿರುತೆರೆ ನಟ ಎಂ.ರವಿಪ್ರಸಾದ್(43) ಬುಧವಾರ ಸಂಜೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಲೇಖಕ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಅವರ ಪುತ್ರರಾದ ರವಿಪ್ರಸಾದ್, ಕೆಲವು ದಿನದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತಂದೆ, ತಾಯಿ, ಇಬ್ಬರು ಸಹೋದರಿಯರು, ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿರುವ ರವಿಪ್ರಸಾದ್ ಅವರ ಮೃತದೇಹದ ಅಂತ್ಯಸಂಸ್ಕಾರ ನಾಳೆ(ಗುರುವಾರ) ನಗರದ ಕಲ್ಲಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇಂಗ್ಲೀಷ್ ವಿಷಯದಲ್ಲಿ ಎಂ.ಎ, ಹಾಗೂ ಕಾನೂನು ಪದವಿ ಪಡೆದಿದ್ದ ರವಿಪ್ರಸಾದ್, ರಂಗಭೂಮಿಯಿಂದ ಆಕರ್ಷಿತರಾಗಿ ಮಂಡ್ಯದ ಪ್ರತಿಷ್ಠಿತ ಸಾಂಸ್ಕøತಿಕ ಸಂಸ್ಥೆಗಳಾದ ಗೆಳೆಯರ ಬಳಗ, ಜನದನಿ, ಇತರೆ ರಂಗಭೂಮಿ ಕ್ಷೇತ್ರದ ಸಂಸ್ಥೆಗಳ ತಂಡದಲ್ಲಿ ನಟನೆ ಮಾಡುವ ಮೂಲಕ ರಂಗಭೂಮಿ ಕ್ಷೇತ್ರಕ್ಕೆ ಕಾಲಿಟ್ಟರು. ಜನದನಿ ಬಳಗದ ಟಿಪ್ಪು ಸುಲ್ತಾನ್ ನಾಟಕದಲ್ಲಿ ಟಿಪ್ಪು ಸುಲ್ತಾನ್ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ್ದರು.

ನಂತರ, ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ನಿರ್ದೇಶನದ ಮಹಾಮಾಯಿ ಧಾರಾವಾಯಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರಪಂಚಕ್ಕೆ ಪ್ರವೇಶ ಪಡೆದು ಟಿ.ಎನ್.ಸೀತಾರಾಂ ಅವರ ಮುಕ್ತ ಮುಕ್ತ, ಮಗಳು ಜಾನಕಿ ಅಲ್ಲದೆ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಮೋಘ ಅಭಿನಯ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಇತ್ತೀಚೆಗೆ ಪ್ರದರ್ಶನ ಕಂಡ ಕಾಫಿ ತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದರು.

ರವಿಪ್ರಸಾದ್ ಅವರ ನಿಧನಕ್ಕೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News