ಕರ್ನಾಟಕದ ಬೆಟ್ಟ ಕುರುಬ ಜನಾಂಗ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ

Update: 2022-09-14 15:39 GMT

ಬೆಂಗಳೂರು, ಸೆ.14: ಕರ್ನಾಟಕದ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳ ಅಂಚಿನಲ್ಲಿ ಬೆಟ್ಟ ಕುರುಬ ಜನಾಂಗ ನೆಲೆಸಿತ್ತು. ಕಾರಣಾಂತರಗಳಿಂದ ಈ ಜನಾಂಗದವರನ್ನು ಒಕ್ಕಲೆಬ್ಬಿಸಲಾಗಿತ್ತು. ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಈ ಜನಾಂಗದವರು ಕಳೆದ 30 ವರ್ಷಗಳಿಂದ ಹೋರಾಡುತ್ತಿದ್ದರು. ಈ ಸಂಬಂಧ ಕರ್ನಾಟಕ ಸರಕಾರ ಮಾಡಿದ ಶಿಫಾರಸ್ಸನ್ನು ಕೇಂದ್ರ ಸಚಿವ ಸಂಪುಟ ಇದೀಗ ಅನುಮೋದಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಬಿಎಸ್‍ವೈ ಅಭಿನಂದನೆ: ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ನಮ್ಮ ರಾಜ್ಯದ ಬೆಟ್ಟಕುರುಬ ಸೇರಿದಂತೆ ಒಟ್ಟು 12 ಜಾತಿಗಳನ್ನು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿರುವುದು ಸ್ವಾಗತಾರ್ಹ. ಆ ಮೂಲಕ ಸಮುದಾಯಗಳ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದ್ದು ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News