ಬೆಂಗಳೂರಿನ ನೆರೆಗೆ BDA ನೇರ ಕಾರಣ: ಎಚ್.ಡಿ.ಕುಮಾರಸ್ವಾಮಿ ಕಿಡಿ

Update: 2022-09-14 16:19 GMT

ಬೆಂಗಳೂರು, ಸೆ.14: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಗಾರಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರ ಅಡಿ ಅತಿವೃಷ್ಟಿ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇದ್ದ ಎಲ್ಲ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿ, ಕಾಲುವೆಗಳನ್ನು ಮುಚ್ಚಿ ಬೆಂಗಳೂರು ಸೌಂದರ್ಯವನ್ನು ಬಿಡಿಎ ನಾಶ ಮಾಡಿತು. ಮಳೆ ಅನಾಹುತ ಈಗಿನಿಂದ ಆಗಿದ್ದಲ್ಲ. 1999 ಈಚೆಗೆ ಐಟಿ ಕ್ಷೇತ್ರ ವೇಗವಾಗಿ ಬೆಳೆಯಲು ತೊಡಗಿತು. ಆಗ ಬೆಂಗಳೂರಿನ ಅಭಿವೃದ್ಧಿ ಬೇಕಾಬಿಟ್ಟಿ ದೊಡ್ಡ ಮಟ್ಟಿಗೆ ಆಯಿತು. ಮುಂದಾಗಬಹುದಾದ ಅನಾಹುತದ ಬಗ್ಗೆ ಯಾರೂ ಗಮನ ಕೊಟ್ಟಿಲ್ಲ ಎಂದರು.

ಯಾವತ್ತು ಬಿಡಿಎ ಹುಟ್ಟಿಕೊಂಡಿತೋ ಆಗಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭವಾಯಿತು. ಕೆರೆಗಳಿದ್ದಿದ್ದರೆ ಈ ರೀತಿ ನೆರೆ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೆರೆ ಅಭಿವೃದ್ಧಿಪಡಿಸಿದ್ದರೆ ನೀರಿನ ಸಮಸ್ಯೆನೆ ಆಗುತ್ತಿರಲಿಲ್ಲ. ಮೇಕೆದಾಟು ಯೋಜನೆಗೆ ಅರ್ಜಿ ಹಾಕಿಕೊಂಡು ಕೂರುವ ಅಗತ್ಯವಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬಿಡಿಎ ನಾಲ್ಕು ಸಾವಿರ ಎಕರೆ ಬಡಾವಣೆಗಾಗಿ ಭೂಮಿ ನೋಟಿಫೈ ಮಾಡುತ್ತದೆ. ಮತ್ತೆ ಯಾರಾದರು ಪ್ರಭಾವ ಬೀರಿದರೆ ಡಿನೋಟಿಫೈ ಮಾಡುತ್ತದೆ. ಆ ಪ್ರಾಧಿಕಾರಕ್ಕೆ ಒಂದು ಸ್ಪಷ್ಟತೆ ಇಲ್ಲ. ಒಂದು ನಿರ್ದಿಷ್ಟ ನೀಲನಕ್ಷೆ ಇಲ್ಲ. ಒಂದು ಕಾಲದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ಸಿಂಗಾಪುರ ಮಾಡಲು ಹೋಗಿಯೇ ಈ ತರ ಆಗಿದೆ ಎಂದು ಅವರು ಕಿಡಿಗಾರಿದರು.

ರಾತ್ರೋರಾತ್ರಿ ಜ್ಞಾನೋದಯ ಆಗಿದೆಯಾ?: ನೆರೆ ವಿಷಯದಲ್ಲಿ ಬೆಂಗಳೂರಿಗೆ ಶಾಶ್ವತ ಪರಿಹಾರ ಬೇಕು. ಸಿಎಜಿ ವರದಿಯಲ್ಲಿ ಕಾಲುವೆ ಮುಚ್ಚಿರುವುದರಿಂದ ಈ ನೆರೆ ಸಮಸ್ಯೆ ಎದುರಾಗಿದೆ ಎಂದು ತಿಳಿಸಲಾಗಿದೆ. ಡ್ರೈನೇಜ್ ಕಟ್ಟಲು ಹಣ ಹೋಗುತ್ತಿದೆಯಾ? ಅಥವಾ ಡ್ರೈನೇಜ್‍ನಲ್ಲೇ ಹಣ ಹರಿದು ಹೋಗುತ್ತಿದೆಯಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಾವು ತಾಂತ್ರಿಕವಾಗಿ, ಆರ್ಥಿಕವಾಗಿ ಬೆಳೆದಿದ್ದೇವೆ. ಆದರೆ ಜನರ ಸಂಕಷ್ಟ ಪರಿಹರಿಸಲು ಏಕೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ಸಿಎಂ ಆದೇಶ ಕೊಟ್ಟ ಮೇಲೆ ರಾತ್ರೋ ರಾತ್ರಿ ಏಕೆ ಜ್ಞಾನೋದಯ ಆಗಿದೆ? ಇಷ್ಟು ದಿನ ಅಧಿಕಾರಿಗಳು ಏಕೆ ಏನೂ ಮಾಡಿಲ್ಲ? ಈ ದೇಶದ ಕಾನೂನು ಬರೀ ಶ್ರೀಮಂತರಿಗಾ? ಬಡವರಿಗೆ ಇಲ್ಲವಾ? ಒಂದು ವಿಸ್ತೃತವಾದ ವರದಿ ತರಿಸಿ ಕ್ರಮ ಕೈಗೊಳ್ಳಬೇಕು. ಮಾನವೀಯತೆಯಿಂದ ಬಡ ಕುಟುಂಬಗಳ ಬಗ್ಗೆ ಯೋಚಿಸಬೇಕು. ಇದು ಅವರು ಮಾಡಿದ ತಪ್ಪಲ್ಲ ಎಂದು ಅವರು ಹೇಳಿದರು.

ಕೇಂದ್ರ ತಂಡ ಬಂದ ಪುಟ್ಟ ಹೋದ ಪುಟ್ಟ: ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇ ಯೋಜನೆಯಿಂದ ಕೆಲ ಸಮಸ್ಯೆ ಎದುರಾಗಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿ ಪ್ರವಾಹಕ್ಕೆ ಕಾರಣ. ಅಲ್ಲದೆ ರಾಮನಗರ ನಗರ ಪ್ರದೇಶದಲ್ಲಿ ನೆರೆ ಉಂಟಾಗಲು ರಾಮನಗರ ಪಕ್ಕದ ಕೆರೆ ಕೋಡಿ ಒಡೆದಿರುವುದೇ ಕಾರಣ ಎಂದು ಕುಮಾರಸ್ವಾಮಿ ಹೇಳಿದರು.

ಕೇಂದ್ರ ತಂಡದ ವಿರುದ್ಧ ಕಿಡಿ: ನೆರೆ ವೀಕ್ಷಣೆಗೆ ಬಂದ ಕೇಂದ್ರ ತಂಡ ‘ಬಂದ ಪುಟ್ಟ ಹೋದ ಪುಟ್ಟ’ ಆದಂತಾಯಿತೋ ಗೊತ್ತಿಲ್ಲ. ಕೇಂದ್ರ ತಂಡದ ಮುಂದೆ ಜನರು ಹಾವೇರಿಯಲ್ಲಿ ಪರಿಹಾರ ಕೊಡಿಸಿ ಇಲ್ಲದಿದ್ದರೆ ವಿಷ ಸೇವಿಸುವ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಅವರು ಗಮನಸೆಳೆದರು.

ಶಿಗ್ಗಾವಿ ತಾಲೂಕಿನಲ್ಲಿ ಕೇಂದ್ರ ತಂಡದ ಪರಿಶೀಲನೆಗೆ ರೈತರು ಅಸಮಾಧಾನಗೊಂಡಿದ್ದರು. ಬೆಳೆ ನಷ್ಟ ಬಗ್ಗೆ ಹೊಲಕ್ಕೆ ಬಾರದೆ ರಸ್ತೆಯಲ್ಲೇ ನಿಂತು ಪರಿಶೀಲನೆ ನಡೆಸಿದ್ದಾರೆ. ಹೀಗಾದರೆ  ಎಷ್ಟರಮಟ್ಟಿಗೆ ಕೇಂದ್ರ ಸರಕಾರಕ್ಕೆ ವರದಿ ಕೊಡುತ್ತಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕೃಷಿ ವಿವಿ ಬಗ್ಗೆ ಅಸಮಾಧಾನ: ಕೃಷಿ ವಿವಿ ಅವರು ಏನು ಮಾಡುತ್ತಿದ್ದಾರೆ? ಐದು ವರ್ಷಗಳಲ್ಲಿ ಏನು ಕೆಲಸ ಮಾಡಿದ್ದಾರೆ? ಮಳೆ ಅನಾಹುತದ ಬಗ್ಗೆ ವೈಜ್ಞಾನಿಕವಾಗಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಕೊಟ್ಟಿದ್ದಾರಾ? ಎಂದು ಅವರು ಪ್ರಶ್ನಿಸಿದರು.

ಎನ್‍ಡಿಆರ್‍ಎಫ್ ಗೈಡ್‍ಲೈನ್ ಬದಲಾವಣೆ ಆಗಿಲ್ಲ. ಐದು ವರ್ಷಕ್ಕೆ ಒಮ್ಮೆ ಪರಿಶೀಲನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News