×
Ad

ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ಆರೋಪ: ತನಿಖೆಗೆ ಕ್ರಮ ವಹಿಸಲಾಗುವುದು ಎಂದ ಸಿಎಂ ಬೊಮ್ಮಾಯಿ

Update: 2022-09-14 21:31 IST

ಬೆಂಗಳೂರು, ಸೆ. 14: ‘ಗಂಗಾ ಕಲ್ಯಾಣ ಯೋಜನೆಯಡಿ 2018-19ರಲ್ಲಿ ಕೊರೆದ ಕೊಳವೆ ಬಾವಿಗಳು, ವಿದ್ಯುತ್ ಸಂಪರ್ಕ ಮತ್ತು ಪಂಪ್ ಮೋಟರ್ ಸಲಕರಣೆಗಳ ವಿತರಣೆ ಟೆಂಡರ್‍ನಲ್ಲಿನ ಅಕ್ರಮ ನಡೆಸಿದ್ದರೆ ತನಿಖೆ ನಡೆಸಲು ಕ್ರಮ ವಹಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿ ಪ್ರತಿಕ್ರಿಯೆ ನೀಡಿದ ಅವರು, ‘ಗಂಗಾ ಕಲ್ಯಾಣ ಯೋಜನೆ ಅಡಿ ಕೊರೆದ ಕೊಳವೆ ಬಾವಿಗಳ ಟೆಂಡರ್ ಸಂಬಂಧ ತನಿಖೆಗೆ ಒಪ್ಪಿಸುತ್ತೇನೆ' ಎಂದರು.
‘2018ರಿಂದ ಈವರೆಗೆ ನಡೆದ ಎಲ್ಲ ಪ್ರಕರಣವನ್ನು ತನಿಖೆ ಮಾಡಲಾಗುವುದು. ಅಲ್ಲದೆ, 2021-22ನೆ ಸಾಲಿನಿಂದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಬಗ್ಗೆಯೂ ಕೆಲವರು ಆಕ್ಷೇಪವೆತ್ತಿದ್ದಾರೆ. ಹೀಗಾಗಿ ಈ ಸಂಬಂಧ ಸಭೆ ನಡೆಸಿ, ಲೋಪದೋಷಗಳನ್ನು ಸರಿಪಡಿಸಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುವುದು' ಎಂದು ಅವರು ತಿಳಿಸಿದರು.

ಗದ್ದಲ: ಆರಂಭಕ್ಕೆ ‘ಗಂಗಾ ಕಲ್ಯಾಣ ಯೋಜನೆ' ಕೊಳವೆಬಾವಿ ಕೊರೆಸುವ ವಿಚಾರ ಕೆಲಕಾಲ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಗದ್ದಲ, ಕೋಲಾಹಲಕ್ಕೂ ಕಾರಣವಾಯಿತು. ಪರಸ್ಪರ ಆರೋಪ-ಪ್ರತ್ಯಾರೋಪವೂ ನಡೆಯಿತು. 430 ಕೋಟಿ ರೂ.ಗಳಷ್ಟು ಅಕ್ರಮ ನಡೆದಿದೆ ಎಂದು ದೂರಿದ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಪಟ್ಟುಹಿಡಿದು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.

ಈ ಮಧ್ಯೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ‘ಹಿಂದುಳಿದ ವರ್ಗಗಳ ನಿಗಮ ಒಂದು ಕೊಳವೆಬಾವಿ ಕೊರೆಸಲು 84 ಸಾವಿರ ರೂ.ಗಳಿದ್ದರೆ, ಎಸ್ಸಿ-ಎಸ್ಟಿ ನಿಗಮ 1.24 ಲಕ್ಷ ರೂ.ನಿಗದಿಪಡಿಸಿದ್ದು, ಇಷ್ಟು ಮೊತ್ತದ ವ್ಯತ್ಯಾಸ ಹೇಗೇ? ಒಟ್ಟಾರೆ 430 ಕೋಟಿ ರೂ.ಗಳಷ್ಟು ಅವ್ಯವಹಾರ ಆಗಿದ್ದು, ಇದನ್ನು ಸರಕಾರದ ಪರಿಶೀಲನೆ ಸಮಿತಿಯೇ ವರದಿ ನೀಡಿದೆ' ಎಂದು ಉಲ್ಲೇಖಿಸಿದರು.

ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಹಿಂದಿನ ಸರಕಾರದ ಅವಧಿಯಲ್ಲಿ ಈ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಪ್ರಿಯಾಂಕ್ ಖರ್ಗೆ, ಹಿಂದಿನ ಸರಕಾರ ಅಂದರೆ ನನ್ನ ಅವಧಿ, ಹಿಂದಿನ ಸಚಿವರ ಅವಧಿ ಎಂದರೆ ಕಾರಜೋಳ ಸಚಿವರಾಗಿದ್ದ ಅವಧಿ ಯಾವುದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವಣ ಸೃಷ್ಟಿಯಾಯಿತು.

ಒಬ್ಬನೆ ಗುತ್ತಿಗೆದಾರನಿಗೆ ರಾಜ್ಯಾದ್ಯಂತ ಎಲ್ಲ ಕೊಳವೆಬಾವಿ ಕೊರೆಯಲು ಟೆಂಡರ್ ನೀಡಿದ್ದು, ಇದರಿಂದ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗುತ್ತಿದೆ. ಹೀಗಾಗಿ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ಯೋಜನೆ ಲಾಭ ಆಗುತ್ತಿಲ್ಲ. ಆದುದರಿಂದ ಜಿಲ್ಲಾ ಮಟ್ಟದಲ್ಲೇ ಗುತ್ತಿಗೆದಾರರನ್ನು ನಿಗದಿಪಡಿಸಬೇಕು' ಎಂದು ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News