ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರ | ಕಲಾಪದಲ್ಲಿ ಚರ್ಚೆಗೆ ಪಟ್ಟು: ಸ್ಪೀಕರ್ ಕಾಗೇರಿ ಆಕ್ಷೇಪ

Update: 2022-09-14 16:10 GMT

ಬೆಂಗಳೂರು, ಸೆ. 14: ‘ಪರಿಶಿಷ್ಟ ಪಂಗಡ(ಎಸ್ಟಿ)ದ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನ' ಕುರಿತ ವಿಷಯ ಚರ್ಚೆಗೆ ಪಟ್ಟು ಹಿಡಿದು ಕಾಂಗ್ರೆಸ್‍ನ ಕಂಪ್ಲಿ ಗಣೇಶ್ ಸೇರಿದಂತೆ ಇನ್ನಿತರ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು ಕೆಲಕಾಲ ವಾಗ್ವಾದಕ್ಕೆ ಕಾರಣವಾಯಿತು.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಎದ್ದು ನಿಂತ ಕಂಪ್ಲಿ ಗಣೇಶ್, ವಿಷಯ ಚರ್ಚೆಗೆ ಪಟ್ಟು ಹಿಡಿದರು. ‘ಈಗ ಅವಕಾಶ ನೀಡಲು ಸಾಧ್ಯವಿಲ್ಲ' ಎಂದು ಸ್ಪೀಕರ್ ಕಾಗೇರಿ ನಿರಾಕರಿಸಿದರು. ಇದರಿಂದ ಆಕ್ರೋಶಿತರಾದ ಗಣೇಶ್, ಕೂಡಲೇ ಸ್ಪೀಕರ್ ಪೀಠದ ಮುಂದಿನ ಬಾವಿಗೆ ಬಂದರು. ಅವರೊಂದಿಗೆ ಪ್ರಿಯಾಂಕ್ ಖರ್ಗೆ, ಅಬ್ಬಯ್ಯ ಪ್ರಸಾದ್ ಸಹಿತ ಇನ್ನಿತರ ಸದಸ್ಯರನ್ನು ಅವರನ್ನು ಅನುಸರಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಇದರಿಂದ ಏಕಾಏಕಿ ತಾಳ್ಮೆ ಕಳೆದುಕೊಂಡ ಸ್ಪೀಕರ್ ಕಾಗೇರಿ, ‘ಏನ್ರೀ ಇದು ಸದನದಲ್ಲಿ ಹೀಗೆ ಹೇಳದೆ ಕೇಳದೆ, ನನ್ನ ಗಮನಕ್ಕೂ ತಾರದೇ ಏಕಾಏಕಿ ಚರ್ಚೆಗೆ ಪಟ್ಟು ಹಿಡಿದರೆ ಸದನ ನಡೆಸಲು ಸಾಧ್ಯವೇ?' ಎಂದು ಗದರಿಸಿದರು. ‘ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿ ವಾಲ್ಮೀಕಿ ಸಮುದಾಯದ ಶ್ರೀಗಳು 200 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಇದೊಂದು ಗಂಭೀರ ವಿಚಾರ. ಹೀಗಾಗಿ ಚರ್ಚೆಗೆ ಅವಕಾಶ ನೀಡಬೇಕು' ಎಂದು ಕೋರಿದರು.

ಇದೇ ವೇಳೆ ಸದನಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿ ಶ್ರೀಗಳು ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ಇದೊಂದು ಗಂಭೀರವಾದ ವಿಚಾರ ಈ ಕುರಿತು ಚರ್ಚೆಗೆ ಸಮಯ ನಿಗದಿಪಡಿಸಿ' ಎಂದು ಸ್ಪೀಕರ್‍ಗೆ ಮನವಿ ಮಾಡಿದರು. ‘ಏಕಾಏಕಿ ಎದ್ದು ನಿಂತು ಚರ್ಚೆ ಮಾಡುತ್ತೇನೆಂದರೆ ಹೇಗೆ? ಇದೇನು ಸದನವೋ ಜಾತ್ರೆಯೋ? ನೋಟಿಸ್ ನೀಡಿದೆಯೇ ಚರ್ಚೆ ಆರಂಭಿಸಿದರೆ ಹೇಗೇ?' ಎಂದು ಕಾಗೇರಿ ಆಕ್ಷೇಪಿಸಿದರು.

ಸೂಕ್ಷ್ಮ ವಿಷಯ: ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರ ಸೂಕ್ಷ್ಮವಾದ ವಿಚಾರ. ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕಿದೆ. ಮುಂದಿನ ವಾರ ಚರ್ಚೆಗೆ ಅವಕಾಶ ಕಲ್ಪಿಸಿ' ಎಂದು ಕೋರಿದರು. ಬಳಿಕ ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟು ತಮ್ಮ ಆಸನಗಳಿಗೆ ಮರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News