ಕಚೇರಿ, ಸಿಬ್ಬಂದಿ ಶೀಘ್ರ ವರ್ಗಾಯಿಸಿ: ಸರಕಾರಕ್ಕೆ ಲೋಕಾಯುಕ್ತ ಪತ್ರ

Update: 2022-09-14 16:20 GMT

ಬೆಂಗಳೂರು, ಸೆ.14: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ ಪ್ರಕರಣ ಸಂಬಂಧ ಕಾರ್ಯಾಚರಣೆ ಚುರುಕುಗೊಳಿಸಿರುವ ಕರ್ನಾಟಕ ಲೋಕಾಯುಕ್ತ, ಸದ್ಯ ಎಸಿಬಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಸೇರಿ ರಾಜ್ಯ ವಿಭಾಗವಾರು ಕಚೇರಿಗಳು ಹಾಗೂ ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾಯಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿದೆ.

ಈ ಸಂಬಂಧ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನಂದಿತಾ ಶರ್ಮಾ ಅವರಿಗೆ ಪತ್ರ ಬರೆದಿದ್ದು, ಎಸಿಬಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಅಧಿಕಾರಿಗಳು ಹಾಗೂ ಇತರ ವೃಂದದ ಸಿಬ್ಬಂದಿಯನ್ನ ತಮ್ಮ ತೆಕ್ಕೆಗೆ ನೀಡಬೇಕು. ಎಸಿಬಿ ಪ್ರಧಾನ ಕಚೇರಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಭಾಗವಾರು ಎಸಿಬಿ ಕಚೇರಿಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ.

ಪ್ರಕರಣಗಳ ವರ್ಗಾಯಿಸುವುದರ ಜೊತೆಗೆ ಎಸಿಬಿಯಲ್ಲಿ ಬಳಸುತ್ತಿದ್ದ ವಾಹನಗಳು, ಉಪಕರಣಗಳು, ಡಿಜಿಟಲ್ ಸಾಕ್ಷ್ಯಾಧಾರಗಳು, ಎಲೆಕ್ಟ್ರಾನಿಕ್ ಡಿವೈಸ್‍ಗಳು ಸೇರಿ ಇನ್ನಿತರ ಸೌಲಭ್ಯಗಳನ್ನು ಹಸ್ತಾಂತರಿಸುವಂತೆ ಪತ್ರದಲ್ಲಿ ಲೋಕಾಯುಕ್ತರು ಉಲ್ಲೇಖಿಸಿದ್ದಾರೆ.

ಪ್ರಕರಣ ಹಸ್ತಾಂತರ ಬಳಿಕ ತನಿಖೆ ಹಾಗೂ ವಿಚಾರಣೆ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ಅಗತ್ಯವಿದೆ. ದಾಳಿ ಅಥವಾ ಟ್ರ್ಯಾಪ್ ಕಾರ್ಯಾಚರಣೆ ನಡೆಸಲು ವಾಹನಗಳ ಅವಶ್ಯಕತೆಯಿದೆ. ಲೋಕಾಯುಕ್ತ ಪ್ರಧಾನ ಕಚೇರಿ ಕಿರಿದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆಯಾದರೆ ಸ್ಥಳಾವಕಾಶ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

2016ರಲ್ಲಿ ಸ್ಥಾಪನೆಯಾದಾಗ ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಅಧಿಕಾರಿಗಳನ್ನ ಮೊಟಕುಗೊಳಿಸಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ರಾಜ್ಯ ಸರಕಾರವು ಎಸಿಬಿ ಮುಖ್ಯಸ್ಥರಿಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News