ನೇರ ನಗದು ವರ್ಗಾವಣೆ: ಯೋಜನೆ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಲು CAG ಶಿಫಾರಸ್ಸು

Update: 2022-09-14 16:26 GMT

ಬೆಂಗಳೂರು, ಸೆ. 14: ‘ನೇರ ನಗದು ವರ್ಗಾವಣೆ ಒಳಗೊಂಡಿರುವ ಸರಕಾರದ ಎಲ್ಲ ಯೋಜನೆಗಳನ್ನು ಗುರುತಿಸಲು ಮತ್ತು ಡಿಬಿಟಿ ಅಡಿ ಸೇರ್ಪಡೆ ಮಾಡಲು ರಾಜ್ಯ ಸರಕಾರವು ಹೊಸದಾಗಿ ಕಾಲಮಿತಿಯನ್ನು ನಿಗದಿಪಡಿಸಬೇಕು' ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ(ಸಿಎಜಿ) ವರದಿ ಶಿಫಾರಸ್ಸು ಮಾಡಿದೆ.

ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2018-20ರ ಅವಧಿಯ ವಹಿವಾಟುಗಳಿಗೆ ಸಂಬಂಧಿಸಿದ ಸಿಎಜಿ ವರದಿಯನ್ನು ಮಂಡಿಸಿದ್ದು, ‘ತಪ್ಪಾಗಿ ಖಾತೆಗೆ ಹಣ ಜಮೆ ಮತ್ತು ವಿಫಲವಾದ, ಬಾಕಿಯಿರುವ, ತಿರಸ್ಕೃತ ವಹಿವಾಟುಗಳು ಇವುಗಳ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಮಯಮಿತಿಯನ್ನು ನಿಗದಿಪಡಿಸಲು ಇಲಾಖೆಗಳಿಗೆ ನಿರ್ದೇಶನ ನೀಡಬೇಕು' ಎಂದು ಸಿಎಜಿ ಸೂಚಿಸಿದೆ.

ಬಾಕಿ ಉಳಿಕೆಗೆ ಆಕ್ಷೇಪ: ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ಬರಬೇಕಾದ 91.99 ಕೋಟಿ ರೂ.ನೇರ ನಗದು ವರ್ಗಾವಣೆ ಮೂಲಕ (ಡಿಬಿಟಿ) ಪಾವತಿಯಾಗದೆ, ಮೂರು ವರ್ಷಗಳಿಂದ ಬಾಕಿ ಉಳಿದಿದೆ. ಅಲ್ಲದೆ, ‘ಕ್ಷೀರಸಿರಿ ಯೋಜನೆ' ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯಲ್ಲಿ(ಡಿಬಿಟಿ) ಹಲವು ನ್ಯೂನತೆಗಳಾಗಿದ್ದು, ಲಕ್ಷಾಂತರ ರೂಪಾಯಿ ಬಾಕಿ ಉಳಿದಿವೆ' ಎಂದು ಸಿಎಜಿ ಆಕ್ಷೇಪಿಸಿದೆ.

‘ರಾಜ್ಯದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ವಿತರಿಸುವ ಪಶುಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆಯ ಕೋರ್ ಡಿಬಿಟಿ ಪೋರ್ಟಲ್ ಹಾಗೂ ಕ್ಷೀರಸಿರಿ ಅಪ್ಲಿಕೇಶನ್‍ಗಳ ಲೆಕ್ಕಪರಿಶೋಧನೆಯನ್ನು ನಡೆಸಿದ್ದು, ‘ಕ್ಷೀರಸಿರಿ' ಯೋಜನೆ ಕಡತಗಳ ಅನುಮೋದನೆಯಲ್ಲಿನ ವಿಳಂಬದಿಂದ 8,464 ಮಂದಿ ಹಾಲು ಉತ್ಪಾದಕರಿಗೆ 56.08 ಲಕ್ಷ ರೂ. ಪಾವತಿಯಾಗುವುದು ಬಾಕಿ ಉಳಿದಿತ್ತು. ಡಿಬಿಟಿ ಮೂಲಕ ನಡೆಸಿದ ಒಟ್ಟಾರೆ ವಹಿವಾಟುಗಳಲ್ಲಿ ಕೇವಲ ಶೇ.83ರಷ್ಟು ಮಾತ್ರ ಯಶಸ್ವಿಯಾಗಿದ್ದವು. ಶೇ.14ರಷ್ಟು ತಿರಸ್ಕøತವಾಗಿದ್ದವು. ವಿಫಲವಾದ ವಹಿವಾಟು ಸರಿಪಡಿಸಿ, ಪುನರಾರಂಭಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ವಿಫಲವಾದವು. ಆದುದರಿಂದ 91,283 ವಹಿವಾಟುಗಳು ಪುನರಾರಂಭಕ್ಕೆ ಕಾಯುತ್ತ ಉಳಿಯಬೇಕಾಯಿತು. ಹೈನುಗಾರರು ಕೆಲ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಬೇಕಾಯಿತು. ಫಲಾನುಭವಿಗಳಿಗೆ ದೊರೆಯಬೇಕಾಗಿದ್ದ ಹಣ ಡಿಬಿಟಿ ಮೂಲಕ ಪಾವತಿಯಾಗಲಿಲ್ಲ' ಎಂದು ಸಿಎಜಿ ವರದಿಯಲ್ಲಿ ಎಚ್ಚರಿಸಿದೆ.

‘2018-19 ಹಾಗೂ 2019-20ರ ಅವಧಿಯಲ್ಲಿ 6.67 ಲಕ್ಷ ಫಲಾನುಭವಿಗಳು ಡಿಬಿಟಿ ಮೂಲಕ ಹಣ ಬಾರದೇ ಸೌಲಭ್ಯದಿಂದ ವಂಚಿತರಾದರು. ಇದರ ಮೊತ್ತ 153.30 ಕೋಟಿ ರೂ.ಗಳಷ್ಟು. ಸಂಬಂಧಿಸಿದ ಇಲಾಖೆಗಳು ಆಧಾರ್ ಅಧಿನಿಯಮ ಹಾಗೂ ಸಂಬಂಧಿಸಿದ ಸುತ್ತೋಲೆಗಳ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದುಕೊಂಡವು. ವಿವಿಧ ಯೋಜನೆಗಳ ಫಲಾನುಭವಿಗಳ ಕುಂದುಕೊರತೆ ಪರಿಹರಿಸುವುದಕ್ಕೆ ಡಿಬಿಟಿ ಕೋಶದಲ್ಲಿ ಸಾರ್ವಜನಿಕ ಕುಂದುಕೊರತೆ ಕೇಂದ್ರ ಆರಂಭಿಸಲಿಲ್ಲ. ಇದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು' ಎಂದು ವರದಿಯಲ್ಲಿ ಸಿಎಜಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News