ಚಿಕ್ಕಮಗಳೂರು: ಮದುವೆಯಾಗಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದ ಜೋಡಿಯ ಮೇಲೆ ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ

Update: 2022-09-14 17:26 GMT

ಚಿಕ್ಕಮಗಳೂರು, ಸೆ.14: ಪರಸ್ಪರ ಪ್ರೀತಿಸಿ ಮದುವೆಯಾಗಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದ ಜೋಡಿಯ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಲಕ್ಷ್ಮೀಪುರ ಗ್ರಾಮದ ನಿವಾಸಿಗಳಾದ ಪ್ರೇಮಿಗಳು ಕಳೆದ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದು, ವಿವಾಹವಾಗಲು ನಿರ್ಧರಿಸಿ ಬುಧವಾರ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ಜೋಡಿಗಳು ಬೇರೆ ಬೇರೆ ಧರ್ಮದವರು ಎಂಬುದನ್ನು ಅರಿತ ಸಂಘಪರಿವಾರದ ಕಾರ್ಯಕರ್ತರು ಅವರನ್ನು ತಡೆದು ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಜೋಡಿಗಳನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿ, ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಿಸಿದ್ದಾರೆಂದು ತಿಳಿದು ಬಂದಿದೆ.

ಘಟನೆಯ ಸುದ್ದಿ ತಿಳಿದ ಬಳಿ ದಲಿತ ಪರ ಸಂಘಟನೆಗಳು ಹಾಗೂ ಇತರ ಮುಖಂಡರು ಪೊಲೀಸ್ ಠಾಣೆಗೆ ಆಗಮಿಸಿ ಪ್ರೇಮಿಗಳ ಪರ ನಿಂತಿದ್ದು, ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಹಲ್ಲೆಗೊಳಗಾದ ಯುವಕ ಆರೋಪಿಗಳ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯುವತಿಗೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ ಎಂದು ತಿಳಿದು ಬಂದಿದೆ.

'ಪರಸ್ಪರ ಸಹಮತದಿಂದ ಪ್ರೀತಿಸುತ್ತಿದ್ದ ಯುವಕ-ಯುವತಿ ವಿವಾಹವಾಗಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದ ವೇಳೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂದು ಯುವಕ ದೂರು ನೀಡಿದ್ದಾನೆ. ದೂರಿನ ಮೇರೆಗೆ ಪರಿಶೀಲನೆ ನಡೆಯುತ್ತಿದೆ.  ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರೇಮಿಗಳು ಪರಸ್ಪತ ಸಹಮತದಿಂದ ಮದುವೆಯಾಗಲು ಮುಂದಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ'.

- ಉಮಾ ಪ್ರಶಾಂತ್, ಎಸ್ಪಿ

---------------------------------------

ಮದುವೆಗೆ ನನ್ನ ವಿರೋಧ ಇಲ್ಲ: ಯುವತಿಯ ತಾಯಿ ಸ್ಪಷ್ಟನೆ

ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿರುವ ವಿಚಾರ ತಿಳಿದು ಯುವತಿಯ ತಾಯಿ ಠಾಣೆಗೆ ಆಗಮಿಸಿದ್ದರು. ಈ ವೇಳೆ ಯುವತಿಯನ್ನು ಪೊಲೀಸ್ ಜೀಪ್‌ನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ಅವರು ಕಣ್ಣೀರು ಹಾಕಿದರು. ‘ನನ್ನ ಮಗಳು, ಅಳಿಯನಿಗೆ ಪೊಲೀಸರು ಯಾವುದೇ ತೊಂದರೆ ನೀಡಬಾರದು. ಮನೆಗೆ ಬರುವಾಗ ಇಬ್ಬರು ಮದುವೆಯ ಹಾರ ಹಾಕಿಕೊಂಡೇ ಬರಲಿ. ಅವರ ಮದುವೆಗೆ ನನ್ನ ವಿರೋಧ ಇಲ್ಲ’ ಎಂದು ಯುವತಿಯ ತಾಯಿ ಈ ವೇಳೆ ಹೇಳಿದರೆನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News