ಲೋಕಾಯುಕ್ತಕ್ಕೆ ನ್ಯಾಯಾಂಗ ಅಧಿಕಾರ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ?

Update: 2022-09-14 17:24 GMT

ಬೆಂಗಳೂರು, ಸೆ.14: ರಾಜ್ಯ ಹೈಕೋರ್ಟ್ ಆದೇಶದನ್ವಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಗೊಳಿಸಿರುವ ರಾಜ್ಯ ಸರಕಾರವು, ಲೋಕಾಯುಕ್ತಕ್ಕೆ ನ್ಯಾಯಾಂಗ ಅಧಿಕಾರ ನೀಡಲು ಈಗಿರುವ ಲೋಕಾಯುಕ್ತ ಕಾನೂನಿಗೆ ತಿದ್ದುಪಡಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಲೋಕಾಯುಕ್ತಕ್ಕೆ ನ್ಯಾಯಾಂಗ ಹಾಗೂ ಪೊಲೀಸ್ ಠಾಣೆ ಅಧಿಕಾರ ನೀಡಲು ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ವಿಧಾನಪರಿಷತ್ ಸಭಾಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಸರಕು ಸೇವಾ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡ ಒಳಾಂಗಣ ವಿನ್ಯಾಸದ ಯೋಜನೆಗೆ 30 ಕೋಟಿ ರೂ., ವಿವಿಧ ನಿರಾವರಿ, ರಸ್ತೆ ಅಭಿವೃದ್ಧಿಗೆ 150 ಕೋಟಿಗೂ ಅಧಿಕ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ರಾಜ್ಯ ಸಂಪನ್ಮೂಲ ಕೇಂದ್ರವನ್ನ, ಸಿಬ್ಬಂದಿ ಆಸ್ತಿ-ಋಣ ಸಮೇತ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ವಿಲೀನ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಘಟನೋತ್ತರ ಅನುಮೋದನೆ, ಬೆಂಗಳೂರು ಟಿಟಿಡಿ 30 ವರ್ಷ ನವೀಕರಣ, ಕರ್ನಾಟಕ ಸಾಮಾನ್ಯ ಸೇವೆ (ನೇಮಕಾತಿ ತಿದ್ದುಪಡಿ) ನಿಯಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News