‘ಭಾರತ್ ಜೋಡೋ’ ಯಾತ್ರೆ ಸೆ.30 ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶ: ಎಂ.ಲಕ್ಷ್ಮಣ್

Update: 2022-09-14 17:52 GMT

ಮಡಿಕೇರಿ ಸೆ.14 : 'ಭಾರತೀಯ ಜನತಾ ಪಾರ್ಟಿಯ ಒಡೆದು ಆಳುವ ನೀತಿಯನ್ನು ವಿರೋಧಿಸಿ, ಸಮಾಜದಲ್ಲಿ ಐಕ್ಯತಾ ಮನೋಭಾವನೆಯನ್ನು ಮೂಡಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿರುವ ಕಾಂಗ್ರೆಸ್‍ನ ‘ಭಾರತ್ ಜೋಡೋ’ (bharat jodo yatra) ಯಾತ್ರೆ ಸೆ.30 ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕವನ್ನು ಪ್ರವೇಶಿಸಲಿದೆ' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕ ಪ್ರದೇಶ ಕಾಂಗ್ರ್ರೆಸ್ ಸಮಿತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಿದ್ದು, ಒಂದು ಲಕ್ಷಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳ್ಳಲಿದ್ದಾರೆ. ಈ ಯಾತ್ರೆ ರಾಜ್ಯದಲ್ಲಿ 511 ಕಿ.ಮೀ. ದೂರವನ್ನು ಕ್ರಮಿಸಲಿದೆ ಎಂದರು.

ಈ ಯಾತ್ರೆ ಕೇವಲ ಕಾಂಗ್ರೆಸ್‍ಗೆ ಮಾತ್ರ ಸೀಮಿತವಾಗಿಲ್ಲ, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರು ತಮ್ಮ ಬೆಂಬಲ ವ್ಯಕ್ತಪಡಿಸಿ ಕೈಜೋಡಿಸುತ್ತಿರುವುದಾಗಿ ತಿಳಿಸಿದರು.

 ಕಳಲೆಯಲ್ಲಿ ಕೊಡಗು ಕಾಂಗ್ರೆಸ್ ಸ್ವಾಗತ : ಗುಂಡ್ಲುಪೇಟೆಗೆ ಆಗಮಿಸುವ ಭಾರತ್ ಜೋಡೋ ಯಾತ್ರೆ, ಬಳಿಕ ಚಾಮರಾಜನಗರದ ಕಳಲೆಗೆ ಆಗಮಿಸಲಿದೆ. ಈ ಸಂದರ್ಭ ಕೊಡಗಿನ 4 ಸಾವಿರಕ್ಕೂ ಹೆಚ್ಚಿನ ಕಾಂಗ್ರೆಸ್ಸಿಗರು, ಜಿಲ್ಲೆಯ ಸಂಸ್ಕøತಿಯನ್ನು ಬಿಂಬಿಸುವ ಕಲಾ ತಂಡಗಳೊಂದಿಗೆ ಸ್ವಾಗತಿಸಲಿದ್ದಾರೆ ಎಂದರು.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಬೆಳಗ್ಗೆ 6 ಗಂಟೆಯಿಂದ 11.30 ಗಂಟೆಯವರೆಗೆ ನಡಿಗೆ ಮಾಡುತ್ತಿದ್ದು, ಬಳಿಕ ಸಂಜೆ ಆಯಾ ಪ್ರದೇಶದ ಸಾರ್ವಜನಿಕರೊಂದಿಗೆ ಸಂವಾದ ಹಾಗೂ ಕಾರ್ನರ್ ಮೀಟಿಂಗ್ ಮಾಡುತ್ತಾರೆ. ಇದು ಯಾವುದೂ ಬಿಜೆಪಿಯವರಂತೆ ಪೂರ್ವಯೋಜಿತವಲ್ಲ, ರಾಹುಲ್ ಗಾಂಧಿ ಅವರು ಆಯಾ ಸಂದರ್ಭಗಳಲ್ಲಿ ಸಮಾಜದ ಯಾವುದೇ ಸ್ತರದ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಅದರಂತೆ ಕಳಲೆಯಲ್ಲೂ ಸಂಜೆ 4 ಗಂಟೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಅ.1 ರಂದು ನಂಜನಗೂಡಿಗೆ ತೆರಳುವ ಯಾತ್ರೆ ಅ.2 ರಂದು ಚಾಮರಾಜನಗರದ ಬದವನವಾಳುಗೆ ಭೇಟಿ ನೀಡಿ ಸಂಜೆ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.3 ರಂದು ಮೈಸೂರಿನಿಂದ ಶ್ರೀರಂಗಟ್ಟಣ, ಬಳಿಕ ಪಾಂಡವಪುರಕ್ಕೆ ಹೀಗೆ 21 ದಿನಗಳ ಕಾಲ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸಂಚರಿಸಲಿದೆ. ಈ ನಡುವೆ ದಸರಾ ಉತ್ಸವದ ಹಿನ್ನೆಲೆ ಯಾತ್ರೆಗೆ ಅ.4 ಮತ್ತು 5 ಹಾಗೂ ಅ.18 ಮತ್ತು 19 ರಂದು ಬಿಡುವು ಇರಲಿದೆ ಎಂದು ಲಕ್ಷ್ಮಣ್ ಮಾಹಿತಿ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News