ಸುರತ್ಕಲ್ ಟೋಲ್ ಗೇಟ್ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳಿ: ಸಚಿವ ಸಿ.ಸಿ ಪಾಟೀಲ್ ಗೆ ಯು.ಟಿ ಖಾದರ್ ಒತ್ತಾಯ
ಬೆಂಗಳೂರು: 'ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿರುವ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸಲು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದು, ಟೋಲ್ ಗೇಟ್ ತೆರವಿಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳ ಬೇಕು' ಎಂದು ವಿಧಾನ ಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ (U. T. Khader) ಹೇಳಿದ್ದಾರೆ.
ಈ ಕುರಿತು ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಯು.ಟಿ ಖಾದರ್, 'ಕಾನೂನು ಪ್ರಕಾರ 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದು ಟೋಲ್ ಗೇಟ್ ಇರಬೇಕು, ಆದರೆ, ತಲಪಾಡಿಯಿಂದ ಸುರತ್ಕಲ್ ಗೆ 30 ಕಿಲೋ ಮೀಟರ್ ಇದ್ದು, ಈ ಪ್ರದೇಶದಲ್ಲಿ ಒಟ್ಟು 3 ಟೋಲ್ ಗೇಟ್ ಬರುತ್ತೆ. 60 ಕಿಲೋ ಮೀಟರ್ ಗಳ ಒಳಗೆ ಟೋಲ್‍ಗೇಟ್‍ಗಳು ಅತ್ಯಂತ ಸಮೀಪದಲ್ಲೇ ಹಾಕಲಾಗಿದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದ್ದು, ಇದರ ತೆರವಿಗೆ ಸಚಿವರು ಸಂಪೂರ್ಣ ಮೇಲುಸ್ತುವಾರಿ ವಹಿಸಿಕೊಳ್ಳಬೇಕು' ಎಂದು ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಅವರನ್ನು ಒತ್ತಾಯಿಸಿದರು.
ಬಳಿಕ ಪ್ರತಿಕ್ರಿಯಿಸಿದ ಸಚಿವ ಸಿ.ಸಿ ಪಾಟೀಲ್, ' 60 ಕಿಲೋ ಮೀಟರ್ ಅಂತರದಲ್ಲಿರುವ ಟೋಲ್ ಗೇಟ್ ಗಳನ್ನು ವಿಲೀನಗೊಳಿಸಲು ಅವಕಾಶವಿದೆ. ಸುರತ್ಕಲ್ ಟೋಲ್ ಗೇಟ್ ಸೇರಿದಂತೆ ರಾಜ್ಯದ 60 ಕಿಲೋ ಮೀಟರ್ ಅಂತರದಲ್ಲಿರುವ ಟೋಲ್ ಪ್ಲಾಝಾಗಳನ್ನು ವಿಲೀನಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಸಚಿವ ನಿತಿನ್ ಗಡ್ಕರಿ ಅವರೂ ಒಪ್ಪಿಕೊಂಡಿದ್ದಾರೆ. ಕಾನೂನು ಬಾಹಿರ ಟೋಲ್ ಗೇಟ್ ತೆರವುಗೊಳಿಸಲು ಸರಕಾರ ಬದ್ಧವಾಗಿದೆ' ಎಂದು ತಿಳಿಸಿದರು.
'ಟೋಲ್ ಗೇಟ್ ಸಿಬ್ಬಂದಿಯ ದಬ್ಬಾಳಿಕೆ':
'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೆ, ರಾಜ್ಯದ ಹಲವೆಡೆ ಈ ರೀತಿ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸಬೇಕಾಗಿದೆ. 30 ಕಿಲೋಮೀಟರ್ ಅಂತರದಲ್ಲಿ ಪದೇ ಪದೇ ದುಡ್ಡು ಕೊಡಬೇಕಾದ ಪರಿಸ್ಥಿತಿ. ಇದಲ್ಲದೆ ಟೋಲ್ ಗೇಟ್ ಸಿಬ್ಬಂದಿಯ ದಬ್ಬಾಳಿಕೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ'.
- ಯು.ಟಿ ಖಾದರ್, ವಿಧಾನ ಸಭೆ ವಿಪಕ್ಷ ಉಪ ನಾಯಕರು.