×
Ad

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಸರಕಾರಿ ಪ್ರಾಯೋಜಿತ ಕೊಲೆ: ಸಿದ್ದರಾಮಯ್ಯ ಆರೋಪ

Update: 2022-09-15 17:58 IST

ಬೆಂಗಳೂರು, ಸೆ. 15: ‘ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್ ಆಸ್ಪತ್ರೆ)ಯಲ್ಲಿ ವಿದ್ಯುತ್ ಕೈಕೊಟ್ಟು ಹಾಗೂ ಆಸ್ಪತ್ರೆ ಜನರೇಟರ್ ಕೆಲಸ ಮಾಡದೆ ವೆಂಟಿಲೇಟರ್ ನಲ್ಲಿ ಐಸಿಯುನಲ್ಲಿದ್ದ ಮೂವರು ರೋಗಿಗಳ ಸಾವು ಪ್ರಕರಣ' ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ‘ಈ ಸಾವಿಗೆ ಸರಕಾರ ಹಾಗೂ ಸಚಿವರೇ ನೇರ ಹೊಣೆ, ಇವು ಆಕಸ್ಮಿಕ ಸಾವುಗಳಲ್ಲ, ಸರಕಾರಿ ಪ್ರಾಯೋಜಿತ ಕೊಲೆ' ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ( Siddaramaiah) ಆರೋಪ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಕೆಲಕಾಲ ವಾಕ್ಸಮರಕ್ಕೆ ಕಾರಣವಾಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಈ ವೇಳೆ ಜನರೇಟರ್ ಕೆಲಸ ಮಾಡದೆ ಐಸಿಯುನಲ್ಲಿದ್ದ ಮೂವರು ರೋಗಿಗಳು ಅಸುನೀಗಿದ್ದಾರೆ. ಈ ಸಾವಿಗೆ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಜಿಲ್ಲಾಡಳಿತ ಹಾಗೂ ಆಸ್ಪತ್ರೆಯ ನಿರ್ದೇಶಕರೇ ನೇರ ಹೊಣೆ. ಕೂಡಲೇ ಮೃತರ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ರೂ.ಪರಿಹಾರ ನೀಡಬೇಕು' ಎಂದು ಆಗ್ರಹಿಸಿದರು.

ನಿಮ್ಮ ಅವಧಿಯಲ್ಲಿ ಆಗಿಲ್ಲವೇ?: ಇದಕ್ಕೆ ಆಕ್ಷೇಪಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಇದು ಆಕಸ್ಮಿಕ ಸಾವಲ್ಲ, ಸರಕಾರಿ ಪ್ರಾಯೋಜಿತವಾದ ಕೊಲೆ ಎಂದರೆ ಹೇಗೆ? ಇವರ ಅವಧಿಯಲ್ಲಿ ಆಕಸ್ಮಿಕ ಸಾವು ಸಂಭವಿಸಲಿಲ್ಲವೇ? ಈ ರೀತಿಯಲ್ಲಿ ಪರಿಶೀಲನೆ ನಡೆಸದೆಯೇ ನೋಟಿಸ್ ನೀಡುವುದು ಸರಿಯಲ್ಲ' ಎಂದು ತಿರುಗೇಟು ನೀಡಿದರು. ಇದರಿಂದ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು. 

ಬಳಿಕ ಸರಕಾರದ ಪರವಾಗಿ ಉತ್ತರ ನೀಡಿದ ಸಚಿವ ಶ್ರೀರಾಮುಲು, ‘ವಿಮ್ಸ್ ಆಸ್ಪತ್ರೆಯಲ್ಲಿ ಸೆ.11ಕ್ಕೆ ಮೌಲಾ ಹುಸೇನ್ ಎಂಬವರು ಮೂತ್ರಪಿಂಡ ಸಮಸ್ಯೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಟ್ಟೆಮ್ಮ ಎಂಬವರು ಹಾವು ಕಡಿತದ ಹಿನ್ನೆಲೆಯಲ್ಲಿ ದಾಖಲಾಗಿದ್ದರು. ಇವರು ಕಾರಣಾಂತರಗಳಿಂದ ಮೃತಪಟ್ಟಿದ್ದಾರೆ. ಆದರೆ, ‘ಸರಕಾರವೇ ಈ ಸಾವಿಗೆ ಹೊಣೆ' ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಅವರ ಸರಕಾರದ ಅವಧಿಯಲ್ಲಿ ಸಾವುಗಳಾಗಿದೆ. ಆದರೆ, ‘ಅವರ ಸರಕಾರ ಮಾಡಿದ್ದು' ಎಂದು ನಾವು ಹೇಳಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಕುರಿತು ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ನಾನು ‘ವಿಮ್ಸ್' ಆಸ್ಪತ್ರೆ ನಿರ್ದೇಶಕರೊಂದಿಗೆ ಮಾತನಾಡಿದ್ದು, ಆ ಸಂದರ್ಭದಲ್ಲಿ ವಿದ್ಯುತ್ ಹೋಗಿತ್ತು. ಆದರೆ, ಜನರೇಟರ್ ಸುಸ್ಥಿತಿಯಲ್ಲಿತ್ತು. ಜೊತೆಗೆ ಯುಪಿಎಸ್ ಇತ್ತು ಎಂದು ಮಾಹಿತಿ ನೀಡಿದ್ದಾರೆ. ಜನರೇಟರ್ ಇಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ, ರೋಗಿಗಳ ಸಾವು ಬೇರೆ ಕಾರಣದಿಂದ ಆಗಿದೆ' ಎಂದು ಶ್ರೀರಾಮುಲು ವಿವರಣೆ ನೀಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಮಾಧ್ಯಮದಲ್ಲಿ ವರದಿಯಾಗಿದೆ. ರಾತ್ರಿ 8:20ರಿಂದ 10.30ರವರಗೆ ವಿದ್ಯುತ್ ಇರಲಿಲ್ಲ. ಈ ವೇಳೆ ಜನರೇಟರ್ ಕೆಲಸ ಮಾಡುತ್ತಿರಲಿಲ್ಲ. ಈ ಕಾರಣದಿಂದ ವೆಂಟಿಲೇಟರ್ ಇಲ್ಲದೆ ಮೂರು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಸಾವಿನ ಜೊತೆ ಚೆಲ್ಲಾಟ ಆಡಬಾರದು' ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ‘ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಪ್ರಯೋಜನವಿಲ್ಲ. ಸಾವಿನ ಬಗ್ಗೆ ಸೂಕ್ತ ಕ್ರಮ ವಹಿಸಬೇಕು' ಎಂದು ಸಲಹೆ ನೀಡಿದರು.

ತನಿಖೆ ನಡೆಸಿ ಸದನಕ್ಕೆ ವರದಿ: ‘ಯಾವುದೇ ಒಂದು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇದ್ದರೆ ಅದಕ್ಕೆ ಅಗತ್ಯವಾಗಿ ಜನರೇಟರ್ ಬ್ಯಾಕಪ್ ಇದ್ದೇ ಇರುತ್ತದೆ. ಈ ಬಗ್ಗೆ ಏನೇ ಸಂಶಯಗಳಿದ್ದರೆ ಈ ಕುರಿತು ತನಿಖೆ ನಡೆಸಿ ಸದನಕ್ಕೆ ವರದಿ ನೀಡಲಾಗುವುದು' ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆ ವಿಷಯವನ್ನು ಅಲ್ಲಿಗೆ ಮುಕ್ತಾಯ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News