ಸೋಮವಾರಪೇಟೆ: ಚೂರಿಯಿಂದ ಇರಿದು ಮಹಿಳೆಯ ಕೊಲೆ
ಮಡಿಕೇರಿ ಸೆ.15 : ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಜಂಬೂರುಬಾಣೆಯಲ್ಲಿ ನಡೆದಿದೆ.
ಸಾಹಿರಾ (35) ಎಂಬಾಕೆ ಮೃತ ಮಹಿಳೆಯಾಗಿದ್ದು, ಆರೋಪಿ ಪೂವಯ್ಯ (ಬೊಳ್ಳು)ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಸಾಹಿರಾಳ ಪತಿ ಹಂಝ 5 ವರ್ಷಗಳ ಹಿಂದೆ ಆಕೆಯನ್ನು ತ್ಯಜಿಸಿದ್ದು, ನಂತರದ ದಿನಗಳಲ್ಲಿ ಆರೋಪಿ ಪೂವಯ್ಯ ಸಾಹಿರಾಳೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಆದರೆ, ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಇಂದು (ಗುರುವಾರ) ಸಾಹಿರಾ ಮನೆಗೆ ತೆರಳಿದ ಪೂವಯ್ಯ ಚೂರಿಯಿಂದ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಸಾಹಿರಾಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಡಿವೈಎಸ್‍ಪಿ ಗಂಗಾಧರಪ್ಪ, ಠಾಣಾಧಿಕಾರಿ ರಾಮಚಂದ್ರನಾಯಕ್ ಭೇಟಿ ನೀಡಿ ಪರಿಶೀಲಿಸಿದರು.