ವಿಮಾ ಕಂಪೆನಿಗಳಿಂದ ರೈತರ 2 ಸಾವಿರ ಕೋಟಿ ರೂ.ಲೂಟಿ: ಶಾಸಕ ಈಶ್ವರ್ ಖಂಡ್ರೆ ಆರೋಪ

Update: 2022-09-15 14:55 GMT

ಬೆಂಗಳೂರು, ಸೆ.15: 'ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯು ಒಂದು ದೋಖಾ ಯೋಜನೆಯಾಗಿದೆ. ವಿಮಾ ಕಂಪೆನಿಗಳು ನಮ್ಮ ರಾಜ್ಯದ ರೈತರು, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಪಾಲು ಸೇರಿ 9 ಸಾವಿರ ಕೋಟಿ ರೂ.ಗಳನ್ನು ಸಂಗ್ರಹ ಮಾಡಿವೆ. ಇದರಲ್ಲಿ ರೈತರ ಪಾಲು 7,030 ಸಾವಿರ ಕೋಟಿ ರೂ.ಇದೆ' ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಈಶ್ವರ್ ಖಂಡ್ರೆ ಹೇಳಿದರು.

ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಮಾ ಕಂಪೆನಿಗಳು ರೈತರಿಗೆ ನಯಾ ಪೈಸೆ ಪರಿಹಾರ ನೀಡಿಲ್ಲ. ಬೆಳೆ ವಿಮೆ ಹೆಸರಿನಲ್ಲಿ ಸೋಂಪ್, ಟಾಟಾ ಎಐಜಿ ಸೇರಿದಂತೆ ಇತರ ವಿಮಾ ಸಂಸ್ಥೆಗಳು ರೈತರಿಂದ ಸುಮಾರು 2 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಿಹೋಗಿದ್ದಾರೆ. ರಾಜ್ಯ ಸರಕಾರ ನಮ್ಮ ರೈತರಿಗೆ ವಿಮೆ ಕಂಪೆನಿಗಳಿಗೆ ಬೆಳೆ ವಿಮೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಸರಕಾರ, ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಇದರಲ್ಲಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣ ಇಟ್ಟು ಪೂಜೆ ಮಾಡುತ್ತೀರಾ? ಆನರ ಸಂಕಷ್ಟಕ್ಕೆ ಸ್ಪಂದಿಸಬೇಕಲ್ಲ. ಬೀದರ್ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬೆಳೆಯುತ್ತಾರೆ. ಶೇ.70ರಷ್ಟು ಸೋಯಾ ಬೆಳೆ ಹಾಳಾಗಿದೆ. ತೊಗರಿ, ಉದ್ದು, ಹೆಸರು ಸೇರಿದಂತೆ ಯಾವ ಬೆಳೆಯೂ ರೈತರ ಕೈಗೆ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಎನ್‍ಡಿಆರ್‍ಎಫ್ ಪಾಲು ಹಂಚಿಕೆ, ಕೋವಿಡ್ ಪರಿಹಾರ, ಜಿಎಸ್ಟಿ ಬಾಕಿ, ಹಣಕಾಸು ಆಯೋಗದಿಂದಲೂ ಕಡಿಮೆ ಪಾಲು ದೊರೆಯುತ್ತಿದೆ. ಕರ್ನಾಟಕದಿಂದ ಅತೀ ಹೆಚ್ಚು ತೆರಿಗೆ ಸಂಗ್ರಹ ಮೂಲಕ ಲಾಭ ಪಡೆಯುವ ಕೇಂದ್ರ ಸರಕಾರ, ನೆರವು ನೀಡುವ ವಿಚಾರದಲ್ಲಿ ಅನ್ಯಾಯ ಮಾಡುವುದು ಏಕೆ? ಇದೇ ರೀತಿ ತಾರತಮ್ಯದ ಪರಿಸ್ಥಿತಿ ಮುಂದುವರೆದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಮಳೆಯಿಂದಾಗಿ ನೆರೆ, ಪ್ರವಾಹದ ಪರಿಸ್ಥಿತಿಯಿಂದ ಜನ ಹೈರಾಣಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಸಾಕೇ? ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರಾ? ಒಂದು ಹೆಕ್ಟೇರ್ ಬೆಳೆ ನಾಶಕ್ಕೆ ಸರಕಾರ 50 ಸಾವಿರ ರೂ.ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ:  ರಾಜಾಹುಲಿ ಆದ್ರೂ ಕಾನೂನಿನ ಮುಂದೆ ಎಲ್ಲರೂ ಒಂದೇ..: ಯಡಿಯೂರಪ್ಪ ರಾಜೀನಾಮೆಗೆ ಬಿಜೆಪಿ ಶಾಸಕ ಯತ್ನಾಳ್ ಆಗ್ರಹ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News