ಮಸೂದ್-ಫಾಝಿಲ್ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಸ್ತಾವನೆ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-09-15 18:00 GMT
ಆರಗ ಜ್ಞಾನೇಂದ್ರ  | ಮಸೂದ್ | ಮುಹಮ್ಮದ್ ಫಾಝಿಲ್

ಬೆಂಗಳೂರು, ಸೆ.15: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಇಬ್ಬರ ಕೊಲೆ ಪ್ರಕರಣಗಳು ಹಾಗೂ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಹಮ್ಮದ್ ಫಾಝಿಲ್ ಎಂಬುವರ ಕೊಲೆ ಪ್ರಕರಣ ದಾಖಲಾಗಿದೆ. ಈ ಎರಡು ಪ್ರಕರಣಗಳಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವು ಕೋಮು ಸಂಬಂಧ ಪ್ರಕರಣವಾಗಿದೆ. ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಸೂದ್-ಫಾಝಿಲ್ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಸ್ತಾವನೆ ಒಳಾಡಳಿತ ಇಲಾಖೆಯ ಮುಂದೆ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ. 

ಗುರುವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಲಿಖಿತ ಉತ್ತರ ನೀಡಿರುವ ಅವರು, ಕಾಸರಗೋಡು ನಿವಾಸಿ ಮಸೂದ್ ಬೆಳ್ಳಾರೆ ಕಳಂಜದಲ್ಲಿರುವ ಅಜ್ಜನ ಮನೆಯಲ್ಲಿ ವಾಸ್ತವ್ಯವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದನು. ಜು.19ರಂದು ಆತನ ಮೇಲೆ ಹಲ್ಲೆಯಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜು.21ರಂದು ಮಸೂದ್ ಮರಣ ಹೊಂದಿದ್ದಾನೆ ಎಂದು ತಿಳಿಸಿದ್ದಾರೆ. 

ಈ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ. ಈ ಪ್ರಕರಣವು ಕೋಮು ಹತ್ಯೆ ಪ್ರಕರಣವಾಗಿಲ್ಲ ಹಾಗೂ ಸ್ಥಳೀಯ ವಿಷಯಕ್ಕೆ ಸಂಬಂಧಿಸಿ ನಡೆದ ಹತ್ಯೆಯಾಗಿದೆ. ಕೆಲವು ಆರೋಪಿಗಳು ಹಾಗೂ ಮೃತ ವ್ಯಕ್ತಿಗೆ ಪರಿಚಯವಿರುವುದು ಕಂಡು ಬಂದಿದ್ದು, ಉದ್ದೇಶಪೂರ್ವಕವಾಗಿ ಯೋಜನೆ ರೂಪಿಸಿ ಹತ್ಯೆ ಮಾಡಿದ ಪ್ರಕರಣವಾಗಿಲ್ಲ. ಅಲ್ಲದೆ, ಸಮಾಜದಲ್ಲಿ ಭಯ ಉಂಟು ಮಾಡುವಂತಹ ಅಂಶಗಳು ಕಂಡು ಬಾರದೆ ಇರುವುದರಿಂದ ಸ್ಥಳೀಯ ಪೊಲೀಸ್ ವತಿಯಿಂದ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.  

ಇದನ್ನೂ ಓದಿ: ದ.ಕ.ಜಿಲ್ಲೆಯಲ್ಲಿ ಸರಣಿ ಕೊಲೆ ಪ್ರಕರಣ | ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೆ ತಾರತಮ್ಯ ಮುಂದುವರಿಸಿದ ಸರಕಾರ: ಯು.ಟಿ. ಖಾದರ್ ಅಸಮಾಧಾನ

ಜು.26ರಂದು ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಪ್ರವೀಣ್ ಕುತ್ತಿಗೆಯ ಮತ್ತು ತಲೆಯ ಭಾಗಕ್ಕೆ ಕಡಿದು ಪರಾರಿಯಾಗಿದ್ದರು. ನಂತರ ಅವರನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರವೀಣ್ ಮೃತಪಟ್ಟಿರುವುದನ್ನು ತಿಳಿಸಿದ್ದಾರೆ. ಈ ಸಂಬಂಧ ಬೆಳ್ಳಾರೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧ 10 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಕರಣದ ತನಿಖೆಯ ಹಂತದಲ್ಲಿ ಆರೋಪಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿ ಬೆಳ್ಳಾರೆ ಮತ್ತು ಸುಳ್ಯ ಪರಿಸರದಲ್ಲಿ ಯಾವುದಾದರೂ ಒಬ್ಬ ಹಿಂದು ಮುಖಂಡನನ್ನು ಹತ್ಯೆ ಮಾಡುವ ಹಾಗೂ ಭಯದ ವಾತಾವರಣವನ್ನು ಉಂಟು ಮಾಡುವ ಉದ್ದೇಶದಿಂದಲೆ ಕೊಲೆ ಪ್ರಕರಣ ಜರುಗಿದೆ. ಆದುದರಿಂದ, ಪ್ರಕರಣದ ತನಿಖಾ ಹಂತದಲ್ಲಿ ಯುಎಪಿ ಕಾಯ್ದೆಯನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ತನಿಖೆ ಮುಂದುವರೆಸಿ ನಂತರದಲ್ಲಿ ಪ್ರಕರಣದಲ್ಲಿ ಕಂಡು ಬಂದ ಅಂಶಗಳು ಮತ್ತು ಭಾರತ ಸರಕಾರದ ಆದೇಶದಂತೆ ಆ.19ರಂದು ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸುರತ್ಕಲ್ ನಲ್ಲಿ ಮುಹಮ್ಮದ್ ಫಾಝಿಲ್ ಎಂಬವರ ಮೇಲೆ ಜು.28ರಂದು 3-4 ಅಪರಿಚಿತ ಯುವಕರು ಏಕಾಏಕಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ಫಾಝಿಲ್‍ನನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಫಾಝಿಲ್ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಕರಣವು ತನಿಖಾ ಹಂತದಲ್ಲಿದೆ. ಮಂಗಳೂರು ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಈ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿ ಪರಿಹಾರ ನೀಡುವ ಪ್ರಸ್ತಾವನೆ ಒಳಾಡಳಿತ ಇಲಾಖೆಯ ಮುಂದೆ ಇಲ್ಲ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News