ಶಿಕ್ಷಕರನ್ನು ನೇಮಿಸದಿದ್ದರೆ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಿ: BJP ಶಾಸಕ ರಾಜುಗೌಡ ಆಗ್ರಹ
ಬೆಂಗಳೂರು, ಸೆ. 15: ‘ಕಲ್ಯಾಣ ಕರ್ನಾಟಕ(ಹೈ.ಕ) ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ನೇಮಕ ಮಾಡಬೇಕು. ಇಲ್ಲವಾದರೆ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡುವ ವ್ಯವಸ್ಥೆಯನ್ನಾದರೂ ತರಬೇಕು' ಎಂದು ಸರಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯ ನರಸಿಂಹ ನಾಯಕ್(ರಾಜುಗೌಡ) ಆಗ್ರಹಿಸಿದ ಪ್ರಸಂಗ ನಡೆಯಿತು.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಿಕ್ಷಕರ ಕೊರತೆ ವಿಷಯ ಪ್ರಸ್ತಾಪಿಸಿದ ಅವರು, ‘ರಾಜ್ಯದ ಇತರೆ ಕಡೆಗಳಲ್ಲಿ 16 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದರೆ, ಹೈಕ ಭಾಗದ ಏಳು ಜಿಲ್ಲೆಗಳಲ್ಲಿ 25 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆಂದು ಶಿಕ್ಷಣ ಸಚಿವರೇ ಹೇಳಿದ್ದಾರೆ. ಹೀಗಾದರೆ ಆ ಭಾಗದ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದರು.
‘ಸರಕಾರದ ಅಂಕಿ-ಅಂಶಗಳ ಪ್ರಕಾರ ಶೇ.40ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ನನ್ನ ಕ್ಷೇತ್ರದಲ್ಲೇ ಹಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದರೂ ಇನ್ನೂ ಕೊರತೆ ಇದೆ. ಹೀಗಾಗಿ ಕೂಡಲೇ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ನನಗಿರುವ ಮಾಹಿತಿ ಪ್ರಕಾರ 80 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದರೆ ಹೇಗೆ? ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‍ನ ಅಮರೇಗೌಡ ಬಯಾಪುರ, ಈಶ್ವರ್ ಖಂಡ್ರೆ, ಹತ್ತಕ್ಕೂ ಹೆಚ್ಚು ಶಾಲೆಗಳಲ್ಲಿ ಒಬ್ಬೆ ಒಬ್ಬ ಖಾಯಂ ಶಿಕ್ಷಕರಿಲ್ಲ. ಬರೀ ಅತಿಥಿ ಶಿಕ್ಷಕರಿಂದಲೇ ಶಾಲೆಗಳನ್ನು ನಡೆಸಬೇಕಾದ ಸ್ಥಿತಿ ಸರಿಯಲ್ಲ. ಕಲ್ಯಾಣ ಕರ್ನಾಟಕ ಭಾಗದ ನಿರ್ಲಕ್ಷ್ಯತೆ, ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಶಿಕ್ಷಕರ ನೇಮಕಾತಿಗೆ ಸರಕಾರ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ಒಟ್ಟು 47 ಸಾವಿರ ಶಿಕ್ಷಕರ ಹುದ್ದೆಗಳ ಖಾಲಿ ಇದ್ದು, ಆ ಪೈಕಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡುತ್ತಿದ್ದು, ಹೈ.ಕ ಭಾಗಕ್ಕೆ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಈಗಾಗಲೇ ಟಿಇಟಿ ಪರೀಕ್ಷೆ ನಡೆಸಲಾಗಿದೆ. ಶೀಘ್ರದಲ್ಲೆ ದಾಖಲಾತಿ ಪರಿಶೀಲನೆ ನಡೆಸಿ ನೇಮಕಾತಿ ಆದೇಶ ನೀಡಲಾಗುವುದು. ಜೊತೆಗೆ ನವೆಂಬರ್ ವೇಳೆಗೆ ಖಾಲಿ ಹುದ್ದೆಗಳ ಭರ್ತಿಗೆ ಮತ್ತೊಮ್ಮೆ ಅರ್ಜಿಯನ್ನು ಆಹ್ವಾನಿಸಲಾಗುವುದು' ಎಂದು ಶಿಕ್ಷಣ ಸಚಿವ ನಾಗೇಶ್ ವಿವರಣೆ ನೀಡಿದರು.