ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ 3 ಕೋಟಿ ರೂ.: ಸಚಿವ ಸುನಿಲ್ ಕುಮಾರ್

Update: 2022-09-15 17:54 GMT

ಬೆಂಗಳೂರು, ಸೆ. 15: ‘ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ 3 ಕೋಟಿ ರೂ., ತಾಲೂಕು ರಂಗ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂ.ಗಳನ್ನು ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಮೊತ್ತದ ಅಗತ್ಯವಿದ್ದರೆ ಬೇರೆ ರೂಪದಲ್ಲಿ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಬೇಕು' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಎಸ್.ಎ.ರವೀಂದ್ರನಾಥ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘15 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ರಂಗಮಂದಿರ ನಿರ್ಮಿಸಿದ್ದು, 6 ಜಿಲ್ಲೆಗಳಲ್ಲಿ ರಂಗಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೂ 10 ಜಿಲ್ಲೆಗಳಲ್ಲಿ ರಂಗ ಮಂದಿರ ನಿರ್ಮಾಣ ಆಗಬೇಕಿದೆ' ಎಂದು ವಿವರಣೆ ನೀಡಿದರು.

ಪರಿಷ್ಕೃತ  ಮೊತ್ತಕ್ಕೆ ಅನುಮೋದನೆ ಕಷ್ಟ: ‘ದಾವಣಗೆರೆ ಜಿಲ್ಲಾ ರಂಗ ಮಂದಿರಕ್ಕೆ 3.50 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಬಳಿಕ 4.50 ಕೋಟಿ ರೂ.ಪರಿಷ್ಕೃತ ಅಂದಾಜಿನ ನಂತರ ಇದೀಗ ಆ ಮೊತ್ತ 8.50 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇಷ್ಟು ಮೊತ್ತದ ಏರಿಕೆಯಾದರೆ ಹೇಗೆ ಅನುದಾನ ಒದಗಿಸಲು ಸಾಧ್ಯ. ಇಲಾಖೆ ಅನುಮೋದನೆ ಪಡೆಯದೇ ಹೀಗೆ ಏರಿಕೆ ಮಾಡುವುದು ಸರಿಯಲ್ಲ' ಎಂದು ಸುನಿಲ್ ಕುಮಾರ್ ಆಕ್ಷೇಪಿಸಿದರು.

ಗೋದಾಮು: ‘ಜಿಲ್ಲೆ ಕೈಗಾರಿಕಾ ಪ್ರದೇಶ. ಹೀಗಾಗಿ ಅಲ್ಲಿ ಗೋದಾಮುಗಳೇ ಹೆಚ್ಚಿದ್ದು, ರಂಗಮಂದಿರವನ್ನು ಅದೇ ಮಾದರಿಯಲ್ಲೇ ನಿರ್ಮಿಸಿದ್ದು, ಅದನ್ನು ರಂಗ ಚಟುವಟಿಕೆಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಪುನರ್ ನಿರ್ಮಿಸಿ ಕೊಡಬೇಕು' ಎಂದು ಸದಸ್ಯ ರವೀಂದ್ರನಾಥ್ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಉಪನಾಯಕ ಯು.ಟಿ. ಖಾದರ್, ‘ಅಬ್ಬಕ್ಕ ರಾಣಿ ರಂಗ ಮಂದಿರದ ಕಾಮಗಾರಿ ಮೊತ್ತವು 12 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, ಇದನ್ನು ಸರಿಪಡಿಸಬೇಕು' ಎಂದು ಆಗ್ರಹಿಸಿದರು.

ಉತ್ತರದಾಯಿತ್ವ ಅಗತ್ಯ: ‘ಬ್ರಿಟಿಷರು ಬಿಟ್ಟು ಹೋದ ಸಂಸ್ಕøತಿ ಯಾರಾದರೂ ಮುಂದುವರಿಸುತ್ತಿದ್ದರೆ ಅದು ಕಾರ್ಯಾಂಗ' ಎಂದು ಅಧಿಕಾರಿಗಳ ವಿಳಂಬ ನೀತಿಗೆ ಆಕ್ಷೇಪಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲ ಹೊಣೆಗಾರಿಕೆ ಶಾಸಕಾಂಗದ ಮೇಲೆ ಹಾಕುತ್ತಿದ್ದು, ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ. ಅವರು ನಿವೃತ್ತಿ ಆಗುವವರೆಗೆ ನೆಮ್ಮದಿಯಿಂದ ಕೆಲಸ ಮಾಡುತ್ತಾರೆ. ಹೀಗಾಗಿ ಕಾಮಗಾರಿ ವಿಳಂಬ ಮಾಡುವ ಅಧಿಕಾರಿಗಳನ್ನು ಜವಾಬ್ದಾರನ್ನಾಗಿ ಮಾಡಬೇಕು' ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News