ಕೋಮು ಗಲಭೆ, ಹತ್ಯೆಗಳ ಘಟನೆ; ತಕ್ಷಣ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ: ಸಚಿವ ಆರಗ ಜ್ಞಾನೇಂದ್ರ

Update: 2022-09-15 18:09 GMT

ಬೆಂಗಳೂರು, ಸೆ.15: ಕೋಮು ಗಲಭೆಗಳು ಮತ್ತು ಕೋಮು ಹತ್ಯೆಗಳ ಘಟನೆ ನಂತರ ತಕ್ಷಣ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.      

ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಮುಖ ಹಬ್ಬಗಳು ಸೇರಿದಂತೆ ಇನ್ನಿತರೆ ದಿನಗಳಲ್ಲಿ ರಾಜ್ಯದ ಗಡಿಭಾಗದಲ್ಲಿ ಚೆಕ್‍ಪೋಸ್ಟ್ ಅಳವಡಿಸಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡಲಾಗಿದೆ. ಜತೆಗೆ ಕೋಮು ಗಲಭೆಗಳ ಘಟನೆ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು.

ಕೆಲವು ಸಂಘಟನೆಗಳು ಅಂತರರಾಜ್ಯ ಸಂಪರ್ಕ ಹೊಂದಿದ್ದು, ಅಂಥ ಸಂಘಟನೆಗಳ ಸದಸ್ಯರು ರಾಜ್ಯಕ್ಕೆ ಬರದಂತೆ ತಡೆಯಲು ನಿಗಾ ವಹಿಸಲಾಗಿದೆ. ಕೋಮು ಸಾಮರಸ್ಯ ಕದಡುವವರ ವಿರುದ್ಧ ರೌಡಿ ಶೀಟರ್ ತೆರೆಯಲಾಗಿದೆ ಹಾಗೂ ಕೋಮು ಸಾಮರಸ್ಯ ಕದಡುವವರನ್ನು ಗಡಿಪಾರು ಮಾಡಲಾಗುವುದು ಎಂದು ಹೇಳಿದರು.

ಅನ್ಯರಾಜ್ಯದ ವ್ಯಕ್ತಿಗಳಿಂದ ಹತ್ಯೆ ನಡೆದಿಲ್ಲ: ಅನ್ಯ ರಾಜ್ಯದ ವ್ಯಕ್ತಿಗಳು ರಾಜ್ಯಕ್ಕೆ ಬಂದು ಇಲ್ಲಿನ ಜನರನ್ನು ಹತ್ಯೆ ಮಾಡುವ ಪ್ರಕರಣಗಳು ವರದಿಯಾಗಿಲ್ಲ. ಆದರೂ ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 
ಶಾಂತಿ ಸಭೆ: ಆಗಾಗ್ಗೆ ಕಡ್ಡಾಯವಾಗಿ ವಿವಿಧ ಕೋಮುಗಳ ಮುಖಂಡರನ್ನು ಕರೆದು ಶಾಂತಿಸಭೆ ನಡೆಸಿ, ಸಾಮರಸ್ಯದ ಮನೋಭಾವದ ಜತೆ ಇತರ ರಾಜ್ಯಗಳಿಂದ ಒಳಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.   


''ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆಕೋರರ ಆಸ್ತಿ ವಶ''

ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಷ್ಟವಾದ ಸಾರ್ವಜನಿಕ ಮತ್ತು ಸರಕಾರಿ ಆಸ್ತಿಗಳನ್ನು ಅಂದಾಜು ಮಾಡಲು ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಅವರನ್ನು ಕ್ಲೈಮ್ ಕಮೀಷನರ್ ಆಗಿ ನೇಮಕ ಮಾಡಲಾಗಿದ್ದು, ವರದಿ ಬಂದ ನಂತರ ಸಂಬಂಧಪಟ್ಟವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಹೇಳಿದ್ದಾರೆ. 2020 ರಲ್ಲಿ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗ ವರದಿ ನೀಡಿದ ನಂತರ ತಪ್ಪಿತಸ್ಥರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ಮುಂದಾಗಲಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News