ಸಂತ್ರಸ್ತ ಬಾಲಕಿಯರನ್ನು ಮಾನಸಿಕ ರೋಗಿಗಳೆಂದು ಬಿಂಬಿಸಿ ಆರೋಪಿಗಳ ರಕ್ಷಣೆಗೆ ಷಡ್ಯಂತ್ರ: ನೈಜ ಹೋರಾಟಗಾರರ ವೇದಿಕೆ ಶಂಕೆ

Update: 2022-09-16 05:30 GMT
ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ನೈಜ ಹೋರಾಟಗಾರರ ವೇದಿಕೆ ಬರೆದಿರುವ ಪತ್ರದ ಪ್ರತಿ.

ಚಿತ್ರದುರ್ಗ, ಸೆ.16: ಚಿತ್ರದುರ್ಗದಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಇಬ್ಬರು ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮಾನಸಿಕ ರೋಗಿಗಳೆಂದು ಬಿಂಬಿಸುವ ಮೂಲಕ ಆರೋಪಿಗಳನ್ನು ರಕ್ಷಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ನೈಜ ಹೋರಾಟಗಾರರ ವೇದಿಕೆ ಶಂಕೆ ವ್ಯಕ್ತಪಡಿಸಿದೆ.

ಈ ಕುರಿತು ನೈಜ ಹೋರಾಟಗಾರರ ವೇದಿಕೆಯು ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಭಾಕರ್ ರಿಗೆ ಪತ್ರ ಬರೆದಿದ್ದು, ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣದಲ್ಲಿ ದೂರುದಾರರಾಗಿರುವ ಸಂತ್ರಸ್ತ, ಅಪ್ರಾಪ್ತ ವಯಸ್ಸಿನ ಇಬ್ಬರು ವಿದ್ಯಾರ್ಥಿನಿಯರು ತಾವು ಅಧ್ಯಕ್ಷರಾಗಿರುವ ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಯಲ್ಲಿದ್ದಾರೆ. ಆದರೆ ಇದೀಗ ಈ ಮಕ್ಕಳ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿವೆ. ಪ್ರಭಾವಿಗಳ ಒತ್ತಡದಿಂದ ತಮ್ಮ ಸುಪರ್ದಿಯಲ್ಲಿರುವ ನೊಂದ ವಿದ್ಯಾರ್ಥಿನಿಯರ ಮೇಲೆ ಮಾನಸಿಕ ಒತ್ತಡ ಹಾಗೂ ಕೌಟುಂಬಿಕ ಒತ್ತಡಗಳನ್ನು ಹೇರುತ್ತಿರುವುದು ಮಾಧ್ಯಮಗಳಲ್ಲಿ ಕೂಡ ವರದಿಯಾಗುತ್ತಿದೆ ಎಂದು ಹೇಳಿದೆ.

 ಮೈಸೂರಿನ ಒಡನಾಡಿ ಸಂಸ್ಥೆಯಿಂದ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುವ ಸಂದರ್ಭದಲ್ಲಿ ಈ ಅಪ್ರಾಪ್ತ ವಯಸ್ಸಿನ ಸಂತ್ರಸ್ತ ನೊಂದ ವಿದ್ಯಾರ್ಥಿನಿಯರು ಆರೋಗ್ಯವಂತರಾಗಿದ್ದು, ಯಾವುದೇ ರೀತಿಯ ಮಾನಸಿಕ ಅಥವಾ ದೈಹಿಕ ಕಾಯಿಲೆಗಳು ಇರುವುದಿಲ್ಲ ಎಂಬುದನ್ನು ರಾಜ್ಯದ ನಾಗರಿಕರು ಗಮನಿಸಿದ್ದಾರೆ. ಆದರೆ ಈಗ ಬಂದ ನಂಬಲರ್ಹವಾದ ಮಾಹಿತಿಗಳ ಪ್ರಕಾರ ನೊಂದಿರುವ ಸಂತ್ರಸ್ತ ವಿದ್ಯಾರ್ಥಿನಿಯರು ಮಾನಸಿಕವಾಗಿ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಆದುದರಿಂದ ಸಮಿತಿಯು ಈ ನೊಂದ ಸಂತ್ರಸ್ತ, ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ನಿಮಾನ್ಸ್ ಗೆ ಸೇರಿಸಿ ಮಾನಸಿಕ ರೋಗಿಗಳೆಂದು ಬಿಂಬಿಸಿ, ಮಾನಸಿಕ ಅಸ್ವಸ್ಥರಾಗಿರುವ ಮಕ್ಕಳಿಂದ ದೂರನ್ನು ದಾಖಲಿಸಲಾಗಿದೆ ಎಂದು  ಆರೋಪಿಗಳನ್ನು ರಕ್ಷಿಸುವ  ಷಡ್ಯಂತರ ನಡೆಯುತ್ತಿದೆ ಎಂಬ ವರದಿ ಆತಂಕಕ್ಕೆ ಕಾರಣವಾಗಿದೆ.

 ಈ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ ಚಿತ್ರದುರ್ಗ ಜಿಲ್ಲಾ ವೈದ್ಯಾಧಿಕಾರಿ ಮತ್ತು ವೈದ್ಯರು ಹಾಗೂ  ಕಾರಾಗೃಹದ ಅಧೀಕ್ಷಕಿ ಮೇಲೆ ಈಗಾಗಲೇ ಲೋಕಾಯುಕ್ತಕ್ಕೆ ದೂರನ್ನು ಸಹ ನೀಡಲಾಗಿತ್ತು. ಆದುದರಿಂದ ಸಂತ್ರಸ್ತ ವಿದ್ಯಾರ್ಥಿನಿಯರು ಯಾರೊಂದಿಗೆ ಇರಲು ಇಷ್ಟ ಪಡುತ್ತಾರೆಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬಲಾಡ್ಯರ ಅಥವಾ ಪ್ರಭಾವಿಗಳ ಒತ್ತಡಕ್ಕೆ ಸಮಿತಿಯವರು ಮಣಿದು ಮಕ್ಕಳನ್ನು ಒತ್ತಾಯಪೂರ್ವಕಾಗಿ ನಿಮಾನ್ಸ್ ಗೆ ದಾಖಲಿಸುವುದಾಗಲಿ ಮಕ್ಕಳ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳುವುದಾಗಲಿ ಮಾಡಿದ್ದಲ್ಲಿ, ಮಕ್ಕಳ ಹಿತ ಬಯಸುವ ರಾಜ್ಯದ ನಾಗರಿಕರು, ಸಮಾನಮನಸ್ಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ. ಆದ್ದರಿಂದ ಮಕ್ಕಳ ಹಿತವನ್ನು ರಕ್ಷಿಸಿ ಯಾವುದೇ ಒತ್ತಡಕ್ಕೆ ಮಣಿಯದೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಾರ್ಯಪ್ರವರ್ತರಾಗಬೇಕೆಂದು ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಅವಶ್ಯಕತೆ ಬಿದ್ದಲ್ಲಿ ಸಂತ್ರಸ್ತ ಬಾಲಕಿಯರನ್ನು ನ್ಯಾಯಾಲಯದ ಮುಂದೆ ಹಾಜೂರುಪಡಿಸಿದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ, ಮಕ್ಕಳ ಮನಸ್ಸಿಗೆ ಒಪ್ಪಿಗೆ ಆಗುವಂತಹ ಅಥವಾ ಮಕ್ಕಳು ಯಾರೊಂದಿಗಿರಲು ಇಷ್ಟಪಡುತ್ತಾರೆ ಎಂಬುದನ್ನು ನ್ಯಾಯಾಲಯವು ಮಕ್ಕಳನ್ನು ವಿಚಾರಣೆಗೊಳಪಡಿಸಿ ತೀರ್ಮಾನಿಸಲಿದೆ. ನಂತರ ಮಕ್ಕಳಿಗೆ  ಅವಶ್ಯಕತೆ ಇರುವ ಚಿಕಿತ್ಸೆಯನ್ನು ನೀಡಲು ನ್ಯಾಯಾಲಯ ನಿರ್ಧರಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯ ಮುಖಂಡರಾದ ಎಚ್.ಎಂ.ವೆಂಕಟೇಶ್, ಎಂ.ಜಿ.ವಾಸುದೇವಮೂರ್ತಿ, ಎಚ್‌.ಜಿ.ರಮೇಶ್ ಕುಣಿಗಲ್, ಸಿ.ಪಿ.ತಿಪ್ಪೇಸ್ವಾಮಿ, ಪ್ರದೀಪ್ ಮೆಂಡೋನ್ಸ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News