ಪಾವಗಡ | ದುಷ್ಕರ್ಮಿಗಳಿಂದ ಗ್ರಾಮ ಪಂಚಾಯತ್ ಕಚೇರಿ ಸ್ಫೋಟಿಸಲು ಯತ್ನ; ಗೋಡೆ ಬಿರುಕು

Update: 2022-09-16 06:54 GMT

ಪಾವಗಡ, ಸೆ.16: ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯನ್ನು ದುಷ್ಕರ್ಮಿಗಳು ಸ್ಫೋಟಕಗಳನ್ನು ಬಳಸಿ ಸ್ಫೋಟಿಸಲು ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಪಂಚಾಯತ್ ಗೋಡೆ ಬಿರುಕು ಬಿಟ್ಟಿದೆ.

ಬೂದಿಬೆಟ್ಟ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಳೆದ ರಾತ್ರಿ 9:30ರ ಸುಮಾರಿಗೆ ಸ್ಫೋಟದ ಸದ್ದು ಕೇಳಿಸಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ಸ್ಫೋಟದ ತೀವ್ರತೆಗೆ ಪಂಚಾಯತ್ ಕಚೇರಿ ಗೋಡೆಗಳು ಬಿರುಕು ಬಿಟ್ಟಿತ್ತು. ಕಿಟಕಿ ಒಡೆದು ದಾಖಲೆಗಳನ್ನು ಸಂಪೂರ್ಣ ಧ್ವಂಸ  ಮಾಡುವ ಯತ್ನ  ನಡೆದಿದೆ. ಸ್ಫೋಟಕ್ಕೆ ಕಚೇರಿಯಲ್ಲಿ ಎರಡು ಕುರ್ಚಿಗಳು ಸುಟ್ಟಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಲಕ್ನೊ: ಭಾರೀ ಆರ್ಥಿಕವಾಗಿ ಸಬಲರಾದ ದಲಿತ ಸಮುದಾಯದವರಿಗೆ ಮೀಸಲಾತಿ ನೀಡಬಾರದು: ಕೆ.ಎಸ್.ಈಶ್ವರಪ್ಪ

ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ಆನಂದಪ್ಪ, ಕಳೆದ ರಾತ್ರಿ 9:30ರ ವೇಳೆ ಸಮಯದಲ್ಲಿ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಭಾರೀ ಸದ್ದು ಕೇಳಿದೆ. ಈ ವೇಳೆ ಪಕ್ಕದಲ್ಲೇ ಇರುವ ಕಂಪ್ಯೂಟರ್ ಆಪರೇಟರ್  ಮಹಾಲಿಂಗಪ್ಪ ಗ್ರಾಪಂಗೆ ಆಗಮಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿಸಿದರು.

ಇದು ದುಷ್ಕರ್ಮಿಗಳ ಕೃತ್ಯ. ಪಂಚಾಯತ್ ಕಚೇರಿಯ ಕಿಟಕಿ ಒಡೆದು ಒಳಗೆ ನುಗ್ಗಿ ಅದ್ಯಾವುದೋ ದಾಖಲೆಪತ್ರಗಳಿಗೆ ತಡಕಾಡಿದ್ದಾರೆ. ಅದು ಸಿಗದೇ ಇದ್ದಾಗ ಈ ಸ್ಫೋಟ ನಡೆಸಿದ್ದಾರೆ ಎಂದು ಗ್ರಾಪಂ ಪಿಡಿಒ ಮುದ್ದರಾಜು ತಿಳಿಸಿದ್ದಾರೆ.

ವೈಎನ್ ಹೊಸಕೋಟೆ ಠಾಣೆಯ ಪಿಎಸ್ಸೈ ಅರ್ಜುನ್ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News