ಕೆಜಿಎಫ್‍ನಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣಕ್ಕೆ ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-09-16 11:35 GMT

ಬೆಂಗಳೂರು, ಸೆ. 16: ‘ಕೋಲಾರ ಜಿಲ್ಲೆಯ ಕೆಜಿಎಫ್‍ನಲ್ಲಿ ಬಿಇಎಂಎಲ್ ಸಂಸ್ಥೆಗೆ ಸೇರಿದ್ದ ಜಮೀನನ್ನು ಕಂದಾಯ ಇಲಾಖೆಯಿಂದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ವರ್ಗಾವಣೆ ಮಾಡಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ರೂಪಕಲಾ ಅವರು ಕೇಳಿದ ಪ್ರಶ್ನೆಗೆ ಉತ್ತರಿದ ಅವರು,‘ಬಿಇಎಂಎಲ್‍ಗೆಸೇರಿದ ಭೂಮಿ 971 ಎಕರೆ ಕಂದಾಯ ಇಲಾಖೆಯಿಂದ ಕೈಗಾರಿಕೆಗೆ ನೀಡಿ,ಅದನ್ನು ಕೆಐಎಡಿಬಿ ಮೂಲಕ ಅಭಿವೃದ್ಧಿಪಡಿಸಬೇಕಿದೆ. ಬೆಂಗಳೂರು ನಗರದ ಸುತ್ತಮುತ್ತ ಭೂಮಿ ಸಿಗುವುದು ಕಷ್ಟ. ಕೆಐಎಡಿಬಿ ಮೂಲಕ ಭೂಸ್ವಾಧೀನಕ್ಕೆ ಮುಂದಾದರೆ ದುಬಾರಿ ಆಗುತ್ತದೆ. ಕೈಗಾರಿಕೆ ಸ್ಥಾಪಿಸಲು ಹೊರೆಯಾಗುತ್ತದೆ' ಎಂದು ಹೇಳಿದರು.

‘ಬೆಂಗಳೂರು ಸಮೀಪದಲ್ಲೇ ಕೆಜಿಎಫ್ ಇದ್ದರೂ ಕೈಗಾರಿಕಾ ವಂಚಿತ ಪ್ರದೇಶವಾಗಿಯೇ ಉಳಿದಿದೆ. ಕೋಲಾರ ಚಿನ್ನ ಗಣಿ ಚಟುವಟಿಕೆ ಸ್ಥಗಿತಗೊಂಡ ಮೇಲೆ ಉದ್ಯೋಗದ ಕೊರತೆ ಸೃಷ್ಟಿಯಾಗಿದೆ. ಈ ವಿಚಾರವನ್ನು ಕೈಗಾರಿಕಾ ಸಚಿವರು ಹಾಗೂ ಆ ಕ್ಷೇತ್ರದ ಶಾಸಕರು ಈ ವಿಚಾರವನ್ನು ಗಮನಕ್ಕೆ ತಂದಿದ್ದು, ಆ ಜಮೀನನಲ್ಲಿ ಕೈಗಾರಿಕೆ ಸ್ಥಾಪಿಸಲು ಕ್ರಮ ವಹಿಸುತ್ತೇವೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ರೂಪಕಲಾ, ‘1964-65ನೆ ಸಾಲಿನಲ್ಲಿ ಕೆಜಿಎಫ್‍ನಲ್ಲಿ ಬೆಮೆಲ್ ಸಂಸ್ಥೆಗೆ ಕಾರ್ಖಾನೆ ಸ್ಥಾಪಿಸಲು 1,949 ಎಕರೆ ಜಮೀನು ನೀಡಲಾಗಿತ್ತು. ಆ ಪೈಕಿ 971 ಎಕರೆ ಜಮೀನು ಇದೆ. ಅದೇ ಭೂಮಿಯಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಿಸಲು ಆ ಭೂಮಿಯನ್ನು ಕಂದಾಯ ಇಲಾಖೆಯಿಂದ ಕೆಐಎಡಿಬಿಗೆ ಹಸ್ತಾಂತರ ಮಾಡಲು ಪತ್ರ ಬರೆದರೂ ಮೂರ್ನಾಲ್ಕು ವರ್ಷಗಳಿಂದ ವಿಳಂಬವಾಗಿದೆ' ಎಂದು ಗಮನ ಸೆಳೆದರು.

‘ಕೆಜಿಎಫ್‍ನಲ್ಲಿ ಚಿನ್ನದ ಗಣಿ ಚಟುವಟಿಕೆ ಸ್ಥಗಿತಗೊಂಡ ಬಳಿಕ ನೂರಾರು ಕಾರ್ಮಿಕರು ಪ್ರತಿನಿತ್ಯ ಉದ್ಯೋಗವನ್ನರಿಸಿ ಬೆಂಗಳೂರು ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳುತ್ತಿದ್ದಾರೆ. ಸರಕಾರ ಕೆಜಿಎಫ್‍ನಲ್ಲೇ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಅಲ್ಲಿನ ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ' ಎಂದು ರೂಪಕಲಾ ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News