ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ನಿಧಿ ರಾಜಕೀಯ ಉದ್ದೇಶಕ್ಕಾಗಿ ಬಳಕೆ: ಎಐಡಿಎಸ್‍ಓ ಆಕ್ರೋಶ

Update: 2022-09-16 11:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.16: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಗ್ರಾಮ ಪಂಚಾಯತ್ ನಿಧಿಯನ್ನು ಸರಕಾರವು ‘ವೇದಗಣಿತ' ಹೇಳಿಕೊಡಲು ಬಳಕೆ ಮಾಡುವ ನಿರ್ಧಾರ ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರಾಟಿಕ್ ಸ್ಟೂಡೆಂಟ್ಸ್ ಆರ್ಗನೈಝೇಶನ್(ಎಐಡಿಎಸ್‍ಓ) ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಪ್ರಕಟನೆ ಹೊರಡಿಸಿರುವ ಎಐಡಿಎಸ್‍ಓನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಈಗಾಗಲೇ ರಾಜ್ಯದ ಸಾವಿರಾರು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ವಿದ್ಯಾರ್ಥಿವೇತನ ದೊರಕದೆ, ಸಮರ್ಪಕ ಹಾಸ್ಟೆಲ್ ಸೌಲಭ್ಯಗಳು ಇಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಿರುವ ನಿಧಿಯನ್ನು, ಆಳುವ ಸರಕಾರವು ತನ್ನ ರಾಜಕೀಯ ದುರುದ್ದೇಶಕ್ಕಾಗಿ ಬಳಕೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಟೀಕಿಸಿದ್ದಾರೆ. 

ನವೋದಯ ಚಳುವಳಿಯ ಚಿಂತಕರು ವೇದ ಶಿಕ್ಷಣದ ಆಚರಣೆಗಳ ವಿರುದ್ಧ ಧ್ವನಿಯೆತ್ತಿ, ಜಾತಿ, ಲಿಂಗ ಹಾಗೂ ಧರ್ಮಗಳ ತಾರತಮ್ಯ ಮಾಡದೆ, ಎಲ್ಲ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ, ವಿಜ್ಞಾನವನ್ನು ಬೋಧಿಸಬೇಕು ಎಂದು ಹೋರಾಟ ಮಾಡಿದ್ದಾರೆ. ವೇದ ಗಣಿತವು ವಿದ್ಯಾರ್ಥಿಗಳಿಗೆ ಬೋಧಿಸಿದರೆ ಅವರಲ್ಲಿ ಸಮಗ್ರ ಜ್ಞಾನ ಬೆಳೆಯಲು ಅದು ಅಡ್ಡಿಯುಂಟು ಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದರು. ಎರಡು ವಿರುದ್ಧ ರೀತಿಯ ಬೋಧನಾ ಕ್ರಮ ವಿದ್ಯಾರ್ಥಿಗಳ ಮನಸ್ಸನ್ನು ನಾಶಗೊಳಿಸುತ್ತದೆ. ಯಾವುದೇ ಶಿಕ್ಷಣ ತಜ್ಞರು ಅಥವಾ ಗಣಿತ ಶಾಸ್ತ್ರಜ್ಞರು ವೇದಗಣಿತವನ್ನು ಪ್ರತಿಪಾದಿಸಲಿಲ್ಲ ಎಂದು ತಿಳಿಸಿದ್ದಾರೆ.

ವಿಜ್ಞಾನಕ್ಕೆ ವಿರುದ್ಧವಾಗಿರುವ ಹಾಗೂ ಶಿಕ್ಷಣ ವಿರೋಧಿ ಆಗಿರುವ ಇಂತಹ ನೀತಿಯನ್ನು ರಾಜ್ಯ ಸರಕಾರ ಈ ಕೂಡಲೇ ಕೈ ಬಿಡಬೇಕು. ವಿದ್ಯಾರ್ಥಿಗಳಿಗೆ ವೈಜಾನಿಕ, ಧರ್ಮನಿರಪೇಕ್ಷ ಶಿಕ್ಷಣವನ್ನು ನೀಡುವಲ್ಲಿ ತನ್ನ ಗಮನವನ್ನು ಹರಿಸಬೇಕು. ಇದರೊಂದಿಗೆ, ಪರಿಶಿಷ್ಟ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ನಿಧಿಯನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅಲ್ಲದೆ ಇನ್ಯಾವುದೇ ಉದ್ದೇಶಕ್ಕೂ ಒಂದೇ ಒಂದು ರೂಪಾಯಿಯನ್ನೂ ಬಳಸಬಾರದು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

'' ಎರಡು ರೀತಿಯ ಗಣಿತ ಭೋಧನೆ ಸರಿಯೇ?''

ವೇದಗಣಿತ ಬೋಧನೆ ಮಾಡಲು ಶಿಕ್ಷಕರ ತರಬೇತಿಯನ್ನು ಸರಕಾರವು ಈಗಾಗಲೇ ಆರಂಭಿಸಿದೆ. ಆದರೆ ಏನನ್ನು ಬೋಧನೆ ಮಾಡಬೇಕು ಎಂದು ನಿರ್ಧಾರ ಮಾಡುವ ತಜ್ಞರು ಯಾರು? ಏಕಕಾಲಕ್ಕೆ ವಿದ್ಯಾರ್ಥಿಗಳಿಗೆ ಎರಡು ವಿರುದ್ಧ ರೀತಿಯ ಗಣಿತಶಾಸ್ತ್ರ ಬೋಧನಾ ವಿಧಾನವನ್ನು ಯಾರು ಶಿಫಾರಸ್ಸು ಮಾಡಿದ್ದಾರೆ? ಇವುಗಳಿಗೆ ಸರಕಾರದ ಬಳಿ ಉತ್ತರವಿಲ್ಲ. ಅಂದರೆ, ತನ್ನ ದುರುದ್ದೇಶವನ್ನು ವಿದ್ಯಾರ್ಥಿಗಳ ಮೇಲೆ ಹೇರುವುದು ಸರಕಾರದ ನಿಜವಾದ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

-ಅಜಯ್ ಕಾಮತ್, ಎಐಡಿಎಸ್‍ಓನ ರಾಜ್ಯ ಕಾರ್ಯದರ್ಶಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News