×
Ad

ವಿಮ್ಸ್ ದುರ್ಘಟನೆಯ ಕಾರಣಕರ್ತರ ಮೇಲೆ ಕಠಿಣ ಕ್ರಮವಹಿಸುವಂತೆ ಸಿಪಿಎಂ ಆಗ್ರಹ

Update: 2022-09-16 19:44 IST

ಬೆಂಗಳೂರು, ಸೆ.16: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಯಲ್ಲಿ ವಿದ್ಯುತ್ ಇಲ್ಲದ ಕಾರಣ ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಸಾವನಪ್ಪಿರುವ ಘಟನೆಯನ್ನು ಆಳವಾದ ತನಿಖೆಗೆ ಒಳಪಡಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್‍ವಾದಿ) ಬಳ್ಳಾರಿ ತಾಲೂಕು ಸಮಿತಿಯು ಸರಕಾರವನ್ನು ಆಗ್ರಹಿಸಿದೆ.

ಬಳ್ಳಾರಿ ನಗರದಲ್ಲಿರುವ ವಿಮ್ಸ್‍ಗೆ ಬಳ್ಳಾರಿ ಜಿಲ್ಲೆಯ ನಗರ ಪ್ರದೇಶ ಮಾತ್ರವಲ್ಲದೇ, ಸುತ್ತಲಿನ ತಾಲೂಕುಗಳಿಂದಲೂ ಮತ್ತು ಅಕ್ಕಪಕ್ಕದ ಮೂರು ನಾಲ್ಕು ಜಿಲ್ಲೆಗಳಿಂದಲೂ ನೂರಾರು ಬಡ ಕುಟುಂಬದ ರೋಗಿಗಳು ವ್ಯೆದ್ಯಕೀಯ ಚಿಕಿತ್ಸೆಗಾಗಿ ಆಗಮಿಸುತ್ತಾರೆ ಎಂದು ಸಿಪಿಎಂ ತಾಲೂಕು ಕಾರ್ಯದರ್ಶಿ ಜೆ.ಚಂದ್ರ ಕುಮಾರಿ ತಿಳಿಸಿದ್ದಾರೆ. 

ಕಳೆದ ಎರಡು ದಿನಗಳ ಹಿಂದೆ, 5 ಗಂಟೆಗಳಿಗೂ ಹೆಚ್ಚು ಸಮಯ ವಿದ್ಯುತ್ ಸರಬರಾಜು ನಿಂತಿದೆ ಮತ್ತು ಅಲ್ಲಿರುವ ಹಳೆಯ ವಿದ್ಯುತ್ ಜನರೇಟರ್ ಕಾರ್ಯನಿರ್ವಹಿಸದ ಕಾರಣ ತುರ್ತು ವಿಭಾಗದಲ್ಲಿ ವೆಂಟಿಲೇಟರ್ ಮೇಲೆ ಇರುವ ಮೂರು ರೋಗಿಗಳಿಗೆ ಆಮ್ಲಜನಕ ಸರಬರಾಜು ಆಗದೇ ಮರಣ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ವಿಮ್ಸ್‍ನ ನಿರ್ದೇಶಕರು ರೋಗಿಗಳು ಕಾಯಿಲೆಗಳಿಂದ ಮರಣ ಹೊಂದಿದ್ದಾರೆ ಎಂದು ದುರ್ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ವಿಮ್ಸ್‍ನ ಕಟ್ಟಡ ಹಳೆಯದಾಗಿದ್ದು ದುರಸ್ಥಿ ಮಾಡಲು ಮುಂದಾಗಬೇಕು ಮತ್ತು ವಿದ್ಯುತ್ ಜನರೇಟರ್‍ಗಳು ಹಳೆದಾಗಿರುವುದರಿಂದ ಸರಿಯಾಗಿ ಕೆಲಸ ಮಾಡದೇ ಇದ್ದ ಕಾರಣ ಈ ದುರಂತ ನಡೆದಿದೆ ಎಂದು ಚಂದ್ರ ಕುಮಾರಿ ಆರೋಪಿಸಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿಯಿಂದ ಸೂಕ್ತವಾಗಿ ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕಾರಣರಾದ ಎಲ್ಲರ ಮೇಲೆ ಕೂಡಲೇ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿ ಒತ್ತಾಯಿಸುತ್ತೇವೆ. ಈ ಕುರಿತು ಜಿಲ್ಲಾಡಳಿತದ ಹೊಣೆಗಾರಿಕೆ ಇರುವ ಜಿಲ್ಲಾಧಿಕಾರಿಗಳು ಕೂಡಲೇ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ಘಟನೆ ಬಗ್ಗೆ ಬಿಗಿಯಾದ ಸೂಕ್ತ ತನಿಖೆ ನಡಸಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ಆಸ್ಪತ್ರೆಯ ಕಟ್ಟಡವನ್ನು ದುರಸ್ಥಿ ಮಾಡುವುದು ಮತ್ತು ಹೊಸ ವಿದ್ಯುತ್ ಜನರೇಟರ್‍ಗಳನ್ನು ಖರೀದಿ ಮಾಡಲು ಕ್ರಮವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೂಡಲೇ ತುರ್ತು ಕ್ರಮ ವಹಿಸಿ ಹೊರ-ಒಳ ರೋಗಿಗಳಿಗೆ ಸುರಕ್ಷತೆ ನೀಡಬೇಕು. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಿದೆ. ಸರಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳದಿದ್ದರೆ ಸಿಪಿಎಂ ಪಕ್ಷ ಹೋರಾಟಕ್ಕೆ ಇಳಿಯುತ್ತದೆ ಎಂದು ಚಂದ್ರ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News