ಬಿಜೆಪಿ ಸರಕಾರದಿಂದ ನಾರಾಯಣ ಗುರುಗಳಿಗೆ ಅವಮಾನ: ಪ್ರಣವಾನಂದ ಸ್ವಾಮೀಜಿ ಆಕ್ರೋಶ

Update: 2022-09-16 18:17 GMT
ಪ್ರಣವಾನಂದ ಸ್ವಾಮೀಜಿ

ಬೀದರ್, ಸೆ.16: ಹಿಂದುಳಿದ ಸಮುದಾಯಗಳನ್ನು ಹತ್ತಿಕ್ಕುತ್ತಿರುವ ಬಸವರಾಜ ಬೊಮ್ಮಾಯಿ ನಿರ್ಲಜ್ಜ ಮುಖ್ಯಮಂತ್ರಿಯಾಗಿದ್ದು, ಶ್ರೀ ನಾರಾಯಣ ಗುರುಗಳಿಗೆ ಅವರು ಅವಮಾನ ಮಾಡಿದ್ದಾರೆ ಎಂದು ಕಲಬುರಗಿಯ ಚಿತ್ತಾಪುರದ ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರ್ಲಜ್ಜ ಸರಕಾರ ಇದೆ. ಸೆ.10ರಂದು ನಡೆದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿಲ್ಲ. ಹಾಗೆಯೇ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‍ನಲ್ಲೂ ನಾರಾಯಣ ಗುರುಗಳಿಗೆ ಅವರು ಗೌರವ ಸಲ್ಲಿಸಲಿಲ್ಲ. ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಸಚಿವ ವಿ.ಸುನೀಲ್‍ಕುಮಾರ್ ತೇಪೆ ಹಚ್ಚಲು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ ಎಂದು ಕಿಡಿಕಾರಿದರು.

‘ಬಿಜೆಪಿ ಮಂಗಳೂರಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದು, ಈಡಿಗ ಸಮುದಾಯದವರು ಎಚ್ಚರ ವಹಿಸಬೇಕು. ಪ್ರವೀಣ್ ನೆಟ್ಟಾರ ಈಡಿಗ ಸಮುದಾಯಕ್ಕೆ ಸೇರಿದ್ದು, ಅವರ ಕುಟುಂಬದವರಿಗೆ ಸರಕಾರಿ ನೌಕರಿ ಕೊಟ್ಟಿಲ್ಲ. ಮುಖ್ಯಮಂತ್ರಿ ಕಚೇರಿಯಲ್ಲಿ ಯಾವುದೋ ಒಂದು ಚಿಕ್ಕ ಕೆಲಸ ಕೊಡಲಾಗಿದೆ. ಬೊಮ್ಮಾಯಿ ಅವಧಿ ಮುಗಿಯುತ್ತಿದ್ದಂತೆಯೇ ಅವರ ನೌಕರಿ ಹೋಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಬೇಸತ್ತು ಗ್ರಾ.ಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪ್ರಣವಾನಂದ ಸ್ವಾಮೀಜಿ

‘ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 70 ಲಕ್ಷ ಈಡಿಗ ಸಮುದಾಯದವರು ಇದ್ದಾರೆ. ಸೇಂದಿ ಇಳಿಸಿ ಮಾರಾಟ ಮಾಡುವುದೇ ಅವರ ಕುಲಕಸುಬಾಗಿದ್ದು, ರಾಜ್ಯ ಸರಕಾರ ಅದನ್ನು ಮುಂದುವರಿಸಲು ಅವಕಾಶ ನೀಡಬೇಕು. ಸಂಕಷ್ಟದಲ್ಲಿರುವ ಈಡಿಗ ಸಮುದಾಯದ ಅಭಿವೃದ್ಧಿಗಾಗಿ ನಿಗಮ, ಮಂಡಳಿ ರಚಿಸಬೇಕು. ಸರಕಾರ ನಾರಾಯಣ ಗುರುಗಳ ಹೆಸರಲ್ಲಿ ಶಾಲೆ ಆರಂಭಿಸಿದರೆ ಸಾಲದು, ಈಡಿಗ ಸಮುದಾಯದ ಮಕ್ಕಳಿಗೆ ಅಲ್ಲಿ ಪ್ರವೇಶ ದೊರೆಯಬೇಕು’ ಎಂದು ಅವರು ಆಗ್ರಹಿಸಿದರು.

''ನಮ್ಮವರಿಂದಲೇ ಅನ್ಯಾಯ'' 

ಸಮುದಾಯದ ಏಳು ಶಾಸಕರು, ಒಬ್ಬರು ಸಚಿವರಿದ್ದರೂ ಸಮಾಜಕ್ಕೆ ಯಾವುದೇ ಲಾಭವಾಗಿಲ್ಲ. ಆರ್ಯ ಈಡಿಗ ಅಭಿವೃದ್ಧಿ ನಿಗಮದ ಬಗ್ಗೆ ಒಂದು ಮಾತೂ ಆಡಿಲ್ಲ. ಕೇಂದ್ರ ಸರಕಾರ ಪಠ್ಯದಲ್ಲಿನ ನಾರಾಯಣ ಗುರುಗಳ ಚರಿತ್ರೆಯನ್ನು ತೆಗೆದು ಹಾಕಿದೆ. ಯು.ಟಿ. ಖಾದರ್ ಅವರು ನಾರಾಯಣ ಗುರುಗಳ ಪಠ್ಯ ಮುಂದುವರಿಸುವಂತೆ ಒತ್ತಾಯಿಸಿದರು. ಆದರೆ, ನಮ್ಮದೇ ಸಮುದಾಯದ ಶಾಸಕರು ಒಂದೂ ಮಾತನಾಡಿಲ್ಲ. ನಮ್ಮವರಿಂದಲೇ ಸಮಾಜಕ್ಕೆ ಅನ್ಯಾಯವಾಗಿದೆ.  ಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು.

-ಪ್ರಣವಾನಂದ ಸ್ವಾಮೀಜಿ, ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News