ದೇಶದ ಐಕ್ಯತೆ ಕಾಪಾಡಲು ಭಾರತ ಜೋಡೋ ಪಾದಯಾತ್ರೆ: ಡಿ.ಕೆ.ಶಿವಕುಮಾರ್

Update: 2022-09-16 16:24 GMT

ಬೆಂಗಳೂರು, ಸೆ.16: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶವನ್ನು ಒಗ್ಗೂಡಿಸಲು, ದೇಶದ ಐಕ್ಯತೆ ಕಾಪಾಡಲು ಭಾರತ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು, ಬೆಲೆ ಏರಿಕೆ ವಿರುದ್ಧ ಹೋರಾಡುವುದು, ನಿರುದ್ಯೋಗಿ ಯುವಕರ ಭವಿಷ್ಯ ರಕ್ಷಣೆ, ರಾಜ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹಾಗೂ ರೈತರು ಮತ್ತು ಕಾರ್ಮಿಕರ ಭವಿಷ್ಯ ರಕ್ಷಿಸಲು ಈ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.

ಬಿಜೆಪಿಯವರು ಕಳೆದ ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿದ್ದು, ಅದರಲ್ಲಿ ಶೇ.90 ರಷ್ಟು ಈಡೇರಿಲ್ಲ. ಹೀಗಾಗಿ ನಾವು ದಿನನಿತ್ಯ ಒಂದೊಂದು ಪ್ರಶ್ನೆ ಕೇಳುತ್ತಿದ್ದು, ಅವರಿಂದ ಒಂದು ದಿನವೂ ಉತ್ತರ ನೀಡಲು ಆಗಿಲ್ಲ. ಸರಕಾರಿ ಹುದ್ದೆಗಳಿಗೆ ಒಂದೊಂದು ದರ ನಿಗದಿ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ದಕ್ಷ ಆಡಳಿತ ನೀಡಬೇಕು ಎಂದು ಶಿವಕುಮಾರ್ ಹೇಳಿದರು.

ಬಿಜೆಪಿಯವರು ಕಾಂಗ್ರೆಸ್‍ನ ಐದು ವರ್ಷದ ಆಡಳಿತದಲ್ಲಿನ ಅಕ್ರಮ ಬಯಲು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ತನಿಖೆ ಯಾಕೆ ಮಾಡಲಿಲ್ಲ? ಅವರು ಯಾವುದೇ ತನಿಖೆ ಬೇಕಾದರೂ ಮಾಡಲಿ. ನಾವು ತಪ್ಪು ಮಾಡಿದ್ದರೆ ನೇಣು ಹಾಕಲು ಹಗ್ಗವನ್ನು ನಾನೆ ಕೊಡಲು ಸಿದ್ಧ ಎಂದು ಅವರು ತಿಳಿಸಿದರು.

ಬಿಜೆಪಿಯ ನಾಯಕ ನನನ್ನು ತಿಹಾರ್ ಜೈಲಿಗೆ ಹೋದವನು ಎಂದು ಹೇಳುತ್ತಾನೆ. ನನ್ನ ಮೇಲೆ ಯಾವ ಹಗರಣದ ಮೇಲೆ ಪ್ರಕರಣ ದಾಖಲಾಗಿದೆ? ನನ್ನ ವಿರುದ್ಧ ಯಾವುದೇ ಲಂಚ ಅಥವಾ ಮಂಚದ ಪ್ರಕರಣವಿಲ್ಲ ಎಂದು ತಿರುಗೇಟು ನೀಡಿದ ಅವರು, ನಾನು ಎಂದಿಗೂ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಪಕ್ಷದ ಅಧ್ಯಕ್ಷನಾಗಿ ನಿಮಗೆ ಅಗೌರವ ತರುವ ಕೆಲಸ ಮಾಡುವುದಿಲ್ಲ. ಅಂತಹ ಕೆಲಸ ಮಾಡಿದ ದಿನ ನಾನು ಅಧಿಕಾರ ತ್ಯಜಿಸುತ್ತೇನೆ ಎಂದರು. 

ಯಾರು ಪಕ್ಷದ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲವೋ ಅವರಿಗೆ ವಿಶ್ರಾಂತಿ ನೀಡಿ ಕೆಲಸ ಮಾಡುವವರಿಗೆ ಪಕ್ಷದಲ್ಲಿ ಅವಕಾಶ ನೀಡಲಾಗುವುದು ಎಂದು ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ. ನಿಮ್ಮೆಲ್ಲರ ಮೇಲೆ ನಂಬಿಕೆ ಇಟ್ಟು ಪಕ್ಷ ನಿಮಗೆ ಭಾರತ ಜೋಡೋ ಪಾದಯಾತ್ರೆ ಜವಾಬ್ದಾರಿ ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಯೋಜಕರನ್ನು ನೇಮಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು. 

ನಮಗೆ ಪ್ರತಿ ಕ್ಷೇತ್ರವೂ ಮುಖ್ಯ. ಕೆಲವರು ನನ್ನ ಬಿಟ್ಟರೆ ನಮ್ಮ ಕ್ಷೇತ್ರದಲ್ಲಿ ಏನು ಮಾಡಲು ಸಾಧ್ಯ ಎಂದು ಭಾವಿಸಿದ್ದಾರೆ. ಕೇರಳದಲ್ಲಿ 13 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಪದಾಧಿಕಾರಿಗಳು ಹಾಗೂ ಸಂಯೋಜಕರಿಂದ ಖಾಸಗಿಯಾಗಿ ಪತ್ರ ಪಡೆದು ಯಾರು ನಿಮ್ಮ ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಅಭಿಪ್ರಾಯ ಕಲೆಹಾಕಿ ಅದನ್ನು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮುಂದೆ ಇಡುತ್ತೇನೆ ಎಂದು ಅವರು ಹೇಳಿದರು.

ಬಿಜೆಪಿಯವರು ಮಾಡಿಸಿರುವ ಸಮೀಕ್ಷೆಯಲ್ಲಿ ಅವರಿಗೆ 65 ಸ್ಥಾನಗಳು ಸಿಗಬಹುದು ಎಂದು ತಿಳಿಸಲಾಗಿದೆ. ನೀವು ಮೈಮರೆಯದೆ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಈ ಪಾದಯಾತ್ರೆಗೆ ಮನೆ ಮನೆಗೂ ಹೋಗಿ ಆಹ್ವಾನಿಸಿ. ಪ್ರತಿ ಶಾಸಕರು 5 ಸಾವಿರ ಜನರನ್ನು ಕರೆತರಬೇಕು. ಪ್ರತಿನಿತ್ಯ ಇಬ್ಬರು ಶಾಸಕರಿಗೆ ಅವಕಾಶ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ರಾಹುಲ್ ಗಾಂಧಿ ನಮ್ಮ ರಾಜ್ಯದ ಮೇಲೆ ನಂಬಿಕೆ ಇಟ್ಟಿದ್ದು, ನಾವು ಮಾದರಿಯಾಗಿ ನಿಲ್ಲಬೇಕು. ನಾವು ಮಾಡಿದ ನಂತರ ಮಹಾರಾಷ್ಟ್ರದಿಂದ ಕಾಶ್ಮೀರದವರೆಗೆ ಎಲ್ಲ ರಾಜ್ಯಗಳು ನಮ್ಮ ಮಾದರಿ ಅಳವಡಿಸಿಕೊಳ್ಳುವಂತೆ ಆಗಬೇಕು. ಅ.2 ರಂದು ಗಾಂಧಿ ಜಯಂತಿಯಂದು ಬದನವಾಳು ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಸರಾ ಹಬ್ಬದ ಸಮಯದಲ್ಲಿ 2 ದಿನ ಪಾದಯಾತ್ರೆಗೆ ವಿಶ್ರಾಂತಿ ನೀಡಲಾಗುವುದು ಎಂದು ಅವರು ಹೇಳಿದರು.

ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ನನಗೆ ಜವಾಬ್ದಾರಿ ಕೊಟ್ಟಾಗ ಈ ಪಕ್ಷ ಉಳಿದರಷ್ಟೇ ನಾನು ಉಳಿಯುತ್ತೇನೆ ಎಂದು ನಿಮ್ಮ ಕೈಯಲ್ಲಿ ಕೆಲಸ ಮಾಡಿಸಿ, ಪಕ್ಷಕ್ಕೆ ಜೀವ ತುಂಬುವ ಕೆಲಸ ಮಾಡಿದ್ದೇನೆ. ಸರಕಾರ ರೈತರ ನೆರವಿಗೆ ಬರದಿದ್ದಾಗ ರೈತರ ಬೆಳೆಗಳನ್ನು ಖರೀದಿಸಲಾಯಿತು, ಊಟ, ಆಹಾರ ಪದಾರ್ಥ, ಆಕ್ಸಿಜನ್, ಆಂಬ್ಯುಲೆನ್ಸ್ ಎಲ್ಲ ರೀತಿಯ ನೆರವನ್ನು ಒದಗಿಸಲಾಯಿತು ಎಂದು ಶಿವಕುಮಾರ್ ಸ್ಮರಿಸಿದರು.

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಮೂರು ಪಟ್ಟು ಹಣ ವಸೂಲಿಗೆ ಸರಕಾರ ಮುಂದಾದಾಗ ನಾಯಕರ ಜೊತೆ ಚರ್ಚಿಸಿ, ಪಕ್ಷದ ವತಿಯಿಂದ 1 ಕೋಟಿ ಚೆಕ್ ತೆಗೆದುಕೊಂಡು ಹೋದೆ. ನಂತರ ಸರಕಾರ ಬೇರೆ ದಾರಿ ಇಲ್ಲದೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿತು. ನಮ್ಮ ಹೋರಾಟ ದೇಶಕ್ಕೆ ಮಾದರಿ ಆಯಿತು. ನಮ್ಮ ಕಾರ್ಯಕ್ಕೆ ಬಿಜೆಪಿಯವರಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ಅವರು ಹೇಳಿದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತಂತಹ 37 ಜನರ ಕುಟುಂಬಗಳಿಗೆ ತಲಾ 1 ಲಕ್ಷ ರೂ.ಪರಿಹಾರ ನೀಡಿದೆವು. ಕಾಂಗ್ರೆಸ್ ಜನರ ಸಂಕಷ್ಟಕ್ಕೆ ನಿಲ್ಲುತ್ತದೆ ಎಂದ ಅವರು, 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಪ್ರತ್ಯೇಕ ಕಾರ್ಯಕ್ರಮ ರೂಪಿಸಿದ್ದೇವೆ. ಇದುವರೆಗೂ 2,444 ಮಂದಿ ದೂರು ನೀಡಲು ನೋಂದಣಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ರಮಾನಾಥ ರೈ, ಎಚ್.ಆಂಜನೇಯ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News