ಚಿಕ್ಕಮಗಳೂರು:ವಿವಾಹಕ್ಕೆ ಅಡ್ಡಿಪಡಿಸಿದ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲು ದಸಂಸ ಒತ್ತಾಯ

Update: 2022-09-16 17:14 GMT

ಚಿಕ್ಕಮಗಳೂರು, ಸೆ.16: ಅಂತರ್ ಧರ್ಮೀಯ ಜೋಡಿ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ಮಾಡಿರುವುದಲ್ಲದೇ ಸಬ್ ರಿಜಿಸ್ಟ್ರಾರ್ ಕಚೇರಿ ಒಳಗಿನಿಂದ ಯುವತಿಯನ್ನು ಬಲವಂತದಿಂದ ಎಳೆದೊಯ್ದು ದಲಿತ ಯುವತಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ದಲಿತ ಸಂಘರ್ಷ ಸಮಿತಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ದಲಿತ ಸಂಘರ್ಷ ಸಮಿತಿ ಎಚ್ಚರಿಸಿದೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ  ರಾಜ್ಯ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ,  'ಅಂತರ್ಧಮೀಯ ಯುವಕ, ಯುವತಿ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಕಾನೂನು ಬದ್ಧವಾಗಿ ಸ್ವಇಚ್ಛೆಯಿಂದ ಮದುವೆಯಾಗಲು ಕಳೆದ ಸೆ.14ರಂದು ಚಿಕ್ಕಮಗಳೂರು ನಗರದ ಸಬ್ ರಿಜಿಸ್ಟರ್ ಕಚೇರಿಗೆ ತೆರಳಿದ್ದರು. ಕಚೇರಿಯಲ್ಲಿ ವಿವಾಹ ನೋಂದಣಿ ಸಂದರ್ಭದಲ್ಲಿ ಬಜರಂಗದಳದ ನಾಲ್ವರು ಕಿಡಿಗೇಡಿಗಳು ಏಕಾಏಕಿ ಕಚೇರಿಗೆ ನುಗ್ಗಿ ವಿವಾಹ ನೋಂದಣಿಯನ್ನು ತಡೆದಿದ್ದಾರೆ. ಅಲ್ಲದೇ ಯುವಕನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಲ್ಲದೇ ಯುವತಿಯನ್ನು ಕಚೇರಿ ಒಳಗಿನಿಂದ ಎಳೆದೊಯ್ಯುವ ಮೂಲಕ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಲವ್ ಜಿಹಾದ್ ಆರೋಪ ಹೊರಿಸಿದ್ದಾರೆ' ಎಂದು ಆರೋಪಿಸಿದರು.

ಬಜರಂಗದಳದ ಕಿಡಿಗೇಡಿಗಳು ಜೋಡಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದ್ಯೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡ ಪೊಲೀಸರು ಯುವಕನಿಗೆ ರಕ್ಷಣೆ ನೀಡದೇ  ಬಜರಂಗದಳದ ಕಾರ್ಯಕರ್ತರಿಗೆ ಒಪ್ಪಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಬಜರಂಗದಳದ ಕಾರ್ಯಕರ್ತರು ಯುವಕನನ್ನು ಪೊಲೀಸ್ ಠಾಣೆಗೆ ಕೊರೆದೊಯ್ಯದೇ ನಗರದ ಕೆಂಪನಹಳ್ಳಿ ಬಡಾವಣೆಗೆ ಕರೆದೊಯ್ಯುದು ಹಲ್ಲೆ ಮಾಡಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ನಂತರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಅಲ್ಲಿನ ಪೊಲೀಸರೂ ಯುವಕನಿಗೆ ರಕ್ಷಣೆ ನೀಡದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.

'ದಲಿತ ಯುವತಿ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ ಕಿಡಿಗೇಡಿಗಳ ವಿರುದ್ದ ಮಹಿಳಾ ದೌರ್ಜನ್ಯ ಕಾಯ್ದೆ ಹಾಗೂ ಅಟ್ರಾಸಿಟಿ ಕಾಯ್ದೆಡಿಯಲ್ಲಿ ಪ್ರಕರಣ ದಾಖಲಿಸಬೇಕು. ಕರ್ತವ್ಯ ಲೋಪ ಎಸಗಿದ ಪೊಲೀಸ್ ಸಿಬ್ಬಂದಿ ಮತ್ತು ಸಬ್ ರಿಜಿಸ್ಟರ್ ಕಚೇರಿ ಅಧಿಕಾರಿಗಳನ್ನು ಅಮಾನತು ಮಾಡಬೇಕು' ಎಂದು ಇದೇ ವೇಳೆ ಶ್ರೀನಿವಾಸ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.  

ಡಿಎಸ್‍ಎಸ್ ಮುಖಂಡ ಹೊನ್ನೇಶ್ ಮಾತನಾಡಿ, 'ಯುವಕ ಮತ್ತು ಯುವತಿ ಸ್ವಇಚ್ಚೆಯಿಂದ ಮದುವೆ ಯಾಗಲು ಮುಂದಾಗಿದ್ದು, ಎರಡು ಕುಟುಂಬಗಳ ಒಪ್ಪಿಗೆಯೂ ಇದೆ. ಈ ಸಂಬಂಧ ಯುವತಿಯ ತಾಯಿ ಹೇಳಿಕೆ ನೀಡಿದ್ದು, ಯುವಕನ ಪೋಷಕರೂ ವಿವಾಹಕ್ಕೆ ಸಮ್ಮತಿಸಿದ್ದಾರೆ. ಆದರೆ ಬಜರಂಗದಳದ ಕಿಡಿಗೇಡಿಗಳು ಲವ್ ಜಿಹಾದ್ ಹೆಸರಿನಲ್ಲಿ ಪ್ರೀತಿಸಿ ವಿವಾಹವಾಗಲು ಮುಂದಾದ ಅಂತರ್ಧಮೀಯ ಜೋಡಿ ವಿವಾಹ ಪ್ರಕರಣವನ್ನು ದಿಕ್ಕು ತಪ್ಪಿಸಲು ಹುನ್ನಾರ ನಡೆಸಿ ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ. ಈ ಮೂಲಕ ಸಾಮರಸ್ಯಕ್ಕೆ ಹೆಸರಾಗಿರುವ ಚಿಕ್ಕಮಗಳೂರು ಜಿಲ್ಲೆಯನ್ನು ಮತ್ತೊಂದು ಶಿವಮೊಗ್ಗ, ಮಂಗಳೂರನ್ನಾಗಿಲು ಯತ್ನಿಸಿದ್ದಾರೆ. ಬಜರಂಗದಳದವರ ಆಟವನ್ನು ಜಿಲ್ಲೆಯಲ್ಲಿ ನಡೆಯಲು ಬಿಡಲ್ಲ' ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ರಮೇಶ್, ಯುವತಿ ಚೈತ್ರಾ, ಯುವಕ ಜಾಪರ್ ಹಾಗೂ ಎಸ್‍ಡಿಪಿಐ ಮುಖಂಡ ಗೌಸ್ ಮುನೀರ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News