ಡಿಸೆಂಬರ್ ವೇಳೆಗೆ ಬೆಳೆಹಾನಿ ಪರಿಹಾರ: ಸಚಿವ ಬಿ.ಸಿ.ಪಾಟೀಲ್

Update: 2022-09-16 17:36 GMT

ಬೆಂಗಳೂರು, ಸೆ.16: 2022ರ ಆಗಸ್ಟ್ ಅಂತ್ಯದವರೆಗೆ 32,500ಕ್ಕೂ ಹೆಚ್ಚು ರೈತರಿಗೆ 530 ಕೋಟಿ ರೂ. ಬೆಳೆ ಪರಿಹಾರವನ್ನು ನೀಡಲಾಗಿದ್ದು, ಇನ್ನುಳಿದ ಬೆಳೆ ಹಾನಿಗೂ ಡಿಸೆಂಬರ್ ಅಂತ್ಯದ ವೇಳೆಗೆ ಮುಂಗಾರು ಹಂಗಾಮಿನ ಬೆಳೆ ಪರಿಹಾರವನ್ನು ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. 

ಶುಕ್ರವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಶಶೀಲ್ ಜಿ. ನಮೋಶಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಬೆಳೆ ನಷ್ಟದ ಕುರಿತು ಕೇಂದ್ರ ತಂಡ ಅಧ್ಯಯನ ಮಾಡಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಅಲ್ಲಿಂದಲೂ ಕೂಡ ಪರಿಹಾರ ಸಿಗಲಿದೆ ಎಂದು ಹೇಳಿದರು. 

ಬೆಳೆ ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 7 ಲಕ್ಷಕ್ಕೂ ಅಧಿಕ ರೈತರು ಬೆಳೆ ವಿಮೆ ಪರಿಹಾರಕ್ಕಾಗಿ ನೋಂದಣಿ ಮಾಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ 7,61,438.86 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಹಾನಿಯಾಗಿವೆ ಎಂದು ತಿಳಿಸಿದರು. 

ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಮತ್ತು ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾವೇರಿ ಜಿಲ್ಲೆ, ಚಿತ್ರದುರ್ಗ, ಯಾದಗಿರಿ, ಬೆಳಗಾವಿ ಜಿಲ್ಲೆಯಲ್ಲಿ  ಒಟ್ಟಾರೆ 7 ಲಕ್ಷ 61 ಸಾವಿರಕ್ಕೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ ಎಂದು ಹೇಳಿದರು. 

'ಹದಿಮೂರು ಶೀತಲ ಘಟಕ ಸ್ಥಾಪನೆ'

ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆಗೆ 13 ಶೀತಲ ಘಟಕಗಳನ್ನು 1241 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News