×
Ad

‘ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2022'ಕ್ಕೆ ಅಸ್ತು

Update: 2022-09-16 23:32 IST

ಬೆಂಗಳೂರು, ಸೆ. 16: ‘ಬಗರ್‍ಹುಕುಂ ಭೂಮಿಯನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2022'ಕ್ಕೆ ವಿಧಾನಸಭೆಯಲ್ಲಿ ಚರ್ಚೆಯ ಬಳಿಕ ಧ್ವನಿಮತರ ಮೂಲಕ ಅಂಗೀಕಾರ ನೀಡಲಾಯಿತು.

ಶುಕ್ರವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ‘ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ವಿವರಣೆ ನೀಡಿದರು. 2005ರ ಜನವರಿ 1ರ ಹಿಂದಿನಿಂದ ಸಾಗುವಳಿ ಮಾಡಲಾಗುತ್ತಿರುವ 2018ರ ಮಾರ್ಚ್ 17ರಿಂದ 2019ರ ಮಾರ್ಚ್ 16ರವರೆಗೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ನಮೂನೆ-57ನ್ನು ಸಲ್ಲಿಸುವುದಕ್ಕೆ ಒಂದು ವರ್ಷ ಕಾಲಾವಕಾಶ ನೀಡುವ ಸಲುವಾಗಿ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗುತ್ತಿದೆ' ಎಂದು ತಿಳಿಸಿದರು.

‘ಕಾರಣಾಂತರಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ-1964ರ 94‘ಎ' ಪ್ರಕರಣವನ್ನು ತಿದ್ದುಪಡಿ ಮಾಡುವುದರ ಮೂಲಕ ನಮೂನೆ-57ರಡಿ ಅರ್ಜಿ ಸಲ್ಲಿಸಲು ಸಮಯ ವಿಸ್ತರಿಸಲು ತಿದ್ದುಪಡಿ ಅವಶ್ಯವೆಂದು ಪರಿಗಣಿಸಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದು ಒಪ್ಪಿಗೆ ನೀಡಬೇಕು' ಎಂದು ಕೋರಿದರು.

ಪಕ್ಷಭೇದ ಮರೆತು ವಿಧೇಯಕವನ್ನು ಸ್ವಾಗತಿಸಿದ ಸದಸ್ಯರು, ಅರ್ಜಿಗಳ ತ್ವರಿತ ವಿಲೇವಾರಿ ಮಾಡಬೇಕು. ಕಾನು, ಸೊಪ್ಪಿನಬೆಟ್ಟ, ಕುಮ್ಕಿ, ಡೀಮ್ಡ್ ಅರಣ್ಯ ಪ್ರದೇಶದ ಬಗ್ಗೆ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 1.05 ಲಕ್ಷದಷ್ಟು ಅರ್ಜಿಗಳು ಬಾಕಿ ಇವೆ. ಅಲ್ಲದೆ, ನಗರ ಪ್ರದೇಶದಲ್ಲಿ ಭೂ ಮಂಜೂರಾತಿಗೆ ಹೇರಿರುವ ಮಿತಿಯನ್ನು ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಬಳಿಕ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ್, ‘ಅರಣ್ಯ ಇಲಾಖೆ ಜತೆ ಸಮಾಲೋಚನೆ ನಡೆಸಿ 7 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವನ್ನು ಕಂದಾಯ ಇಲಾಖೆ ವಶಕ್ಕೆ ಪಡೆಯುತ್ತಿದ್ದು, ಸಾಗುವಳಿ ಮಾಡುತ್ತಿರುವ ರೈತರಿಗೆ ಆ ಭೂಮಿ ನೀಡಲಾಗುವುದು. ನಗರ ವ್ಯಾಪ್ತಿಯಲ್ಲಿ ಮಿತಿಯನ್ನು ಸಡಿಲಿಸಲು ಪರಿಶೀಲನೆ ನಡೆಸಲಾಗುವುದು. ಒತ್ತುವರಿ ಮಾಡಿರುವ ಕಾಫಿ ಮತ್ತು ಟೀ ತೋಟವನ್ನು ಕೇರಳ ಮಾದರಿಯಲ್ಲಿ ಆ ಮಾಲಕರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು' ಎಂದು ವಿವರಣೆ ನೀಡಿದರು.

ಕರ್ನಾಟಕ ಭೂ ಕಂದಾಯ ತಿದ್ದುಪಡಿ ಅದ್ಯಾದೇಶ ಹೊರಡಿಸಲಾಗಿತ್ತು. ಈ ವಿಧೇಯಕವು ಅದ್ಯಾದೇಶದ ಬದಲಿ ವಿಧೇಯಕವಾಗಿದೆ. ಈ ತಿದ್ದುಪಡಿಯಿಂದ ಯಾವುದೇ ಹೆಚ್ಚಿನ ವೆಚ್ಚಗಳು ಇರುವುದಿಲ್ಲ. ಈ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಸದನ ಕೋರಿದರು. ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದ್ದು, ಸದನ ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

‘ಶ್ರೀಮಂತರಿಗೆ ಸರಕಾರಿ ಭೂಮಿ ಮಂಜೂರು ಮಾಡಿದರೆ ಅವರು ಕೆಲ ದಿನಗಳ ಬಳಿಕ ಮಾರಾಟ ಮಾಡುತ್ತಾರೆ. ಬಡವರ ಹೆಸರಿನಲ್ಲಿ ಇದು ಉಳ್ಳವರಿಗೆ ಅನುಕೂಲ ಆಗುತ್ತದೆ. ಹೀಗಾಗಿ ಭೂಮಿ ಇಲ್ಲದವರಿಗೆ ಮಂಜೂರು ಮಾಡಬೇಕೆ ಹೊರತು ಉಳ್ಳವರಿಗೆ ಭೂಮಿ ಮಂಜೂರು ಸರಿಯಲ್ಲ. ಇದು ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಭವಿಷ್ಯದ ದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ, ಆಟದ ಮೈದಾನ ಸೇರಿದಂತೆ ಇನ್ನಿತರ ಸೌಕರ್ಯಗಳಿಗೆ ಸರಕಾರಿ ಭೂಮಿ ಈಗಿನಿಂದಲೇ ಕಾಯ್ದಿರಿಸಬೇಕು'

-ಯು.ಟಿ.ಖಾದರ್ ವಿಪಕ್ಷ ಉಪನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News