ಕಲಬುರಗಿ: ಸಿಎಂ ಬೊಮ್ಮಾಯಿಗೆ ಕಪ್ಪು ಬಟ್ಟೆ ಪ್ರದರ್ಶನ

Update: 2022-09-17 14:23 GMT

ಕಲಬುರಗಿ, ಸೆ.17: ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಕೇಂದ್ರ ಸರಕಾರ ಆದೇಶ ಮಾಡಿದ್ದರೂ, ರಾಜ್ಯದಲ್ಲಿ ಅದು ಅನುಷ್ಠಾನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದಲ್ಲದೆ, ಚಲಿಸುತ್ತಿದ್ದ ಅವರ ಕಾರಿನ ಒಳಗೆ ಮನವಿ ಪತ್ರ ಎಸೆದ ತಳವಾರ ಸಮುದಾಯದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ ನಿಮಿತ್ತ ಕಲಬುರಗಿ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ, ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ವಲ್ಲಭಭಾಯ್ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಕೇಂದ್ರ ಸರಕಾರ ಆದೇಶ ಮಾಡಿದ್ದರೂ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ತಹಶೀಲ್ದಾರ್‍ಗಳು ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದಲ್ಲದೆ, ಕೋಲಿ, ಕಬ್ಬಲಿಗ ಹಾಗೂ ಗಂಗಾಮತಸ್ಥ ಸಮುದಾಯಗಳನ್ನೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

ರಾಜ್ಯ ತಳವಾರ ಎಸ್ಟಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಸರದಾರಾಯಪ್ಪ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ರಾಜ್ವಾಳ್ ಜೆರಿ, ತಾಲೂಕು ಅಧ್ಯಕ್ಷರಾದ ಗಿರಿ ತುಂಬಿ, ಸುನಿತಾ ಎಂ ತಳವಾರ್, ದಿಗಂಬರ್ ಮುದುಕಣ್ಣ, ಪ್ರೇಮ್ ಕಾಲಿ, ಸಂತೋಷ್ ತಳವಾರ್, ಸೈಬಣ್ಣ ತಳವಾರ್, ಜೈ ಶಂಕರ್ ರಾಯಪ್ಪ ಸೇರಿದಂತೆ ಸುಮಾರು 20 ಮಂದಿ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಳ್ಳು ಭರವಸೆ ನೀಡಿದ್ದಕ್ಕೆ ಕಪ್ಪು ಬಟ್ಟೆ ಪ್ರದರ್ಶನ: ಬಸವಕಲ್ಯಾಣ, ಸಿಂಧಗಿ ಹಾಗೂ ಮಸ್ಕಿ ಉಪ ಚುನಾವಣೆ ಸಂದರ್ಭದಲ್ಲಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಜಾತಿ ಪ್ರಮಾಣ ಪತ್ರ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು ಎಂದು ಸರದಾರಾಯಪ್ಪ ತಿಳಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ನಾವು ಮುತ್ತಿಗೆ ಹಾಕಿದಾಗ 48 ಗಂಟೆಗಳಲ್ಲಿ ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುತ್ತೇನೆ. ಇಲ್ಲದಿದ್ದರೆ, ನನ್ನನ್ನು ಕಲಬುರಗಿಗೆ ಬರಲು ಬಿಡಬೇಡಿ ಎಂದು ಮುಖ್ಯಮಂತ್ರಿ ವಾಗ್ದಾನ ಮಾಡಿದ್ದರು. ಆದರೆ, ಈವರೆಗೆ ಅವರು ಕೊಟ್ಟ ಭರವಸೆ ಈಡೇರಿಲ್ಲ. ಆದುದರಿಂದ ನಾವು ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಬಿಎಸ್ ವೈ, ವಿಜಯೇಂದ್ರ ವಿರುದ್ಧ FIR​ ದಾಖಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News