PSI ಹಗರಣದಲ್ಲಿ ಮೈಸೂರಿನ ಸಂಚಾರ ವಿಭಾಗದ ಮಹಿಳಾ ಪಿಎಸ್ಐ ಭಾಗಿ: ಎಂ.ಲಕ್ಷ್ಮಣ್ ಆರೋಪ

Update: 2022-09-17 09:49 GMT
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ | ಪಿಎಸ್ಐ  ಅಶ್ವಿನಿ ಅನಂತಪುರ

ಮೈಸೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ಪಿಎಸ್ಐ ನೇಮಕಾತಿ ಹಗರಣದಲ್ಲಿ ಮೈಸೂರಿನ ಎನ್.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್ಐಯೊಬ್ಬರು ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ. 

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ  ಮಧ್ಯವರ್ತಿ ಪಿಎಸ್ಐ  ಅಶ್ವಿನಿ ಅನಂತಪುರ  ಮತ್ತು ಪಿ.ಎಸ್.ಐ ಆಕಾಂಕ್ಷಿ ಸಂಗಮೇಶ ಜಳಕಿ ಎಂಬುವರೊಂದಿಗೆ ನಡೆದಿರುವ ಮೊಬೈಲ್ ಸಂಭಾಷಣೆಯ ಆಡಿಯೋ ಬಿಡುಗಡೆಮಾಡಿದರು.

ಈ ಆಡಿಯೋದಲ್ಲಿ ಮಧ್ಯವರ್ತಿ ಎನ್ನಲಾದ ಪಿಎಸ್ಐ ಅಶ್ವಿನಿ ಅನಂತಪುರ ಪಿಎಸ್ಐ  ಹುದ್ದೆ ಸೇರಿದಂತೆ ಕೆಎಂಎಫ್, ಬೆಸ್ಕಾಂ, ಚೆಸ್ಕಾಂ, ಕೆಪಿಎಸ್ಸಿ ಹುದ್ದೆಗಳಿಗೆ ನಿಗದಿಯಾಗಿರುವ ಲಂಚದ ಮೊತ್ತದ ಬಗ್ಗೆ ಚರ್ಚೆ ನಡೆಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 

ಇದರೊಂದಿಗೆ ಪಿಎಸ್ಐ  ಆಕಾಂಕ್ಷಿ ಸಂಗಮೇಶ ಜಳಕಿ ವ್ಯಕ್ತಿಯೊಬ್ಬರಿಗೆ ಹತ್ತು ಬಾರಿ ಆರ್.ಟಿ.ಜಿ.ಎಸ್ ಮೂಲಕ ಲಂಚದ ಹಣವನ್ನು ಸಂದಾಯ ಮಾಡಿರುವ ದಾಖಲೆಯ ಪ್ರತಿಯನ್ನು ಕೂಡ ಲಕ್ಷ್ಮಣ್ ಮಾಧ್ಯದಮದವರ ಮುಂದೆ ಪ್ರದರ್ಶಿಸಿದರು.

'ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಪರಮಾವಧಿ ತಲುಪಿದೆ. ಕಳೆದ ಮೂರು ವರ್ಷಗಳಿಂದ ಹೊಸದಾಗಿ ನೇಮಕಗೊಂಡ ಹುದ್ದೆಗಳಲ್ಲಿ ಯಾವುದೇ ಪಾರದರ್ಶಕರೆ ನಡೆದಿಲ್ಲ, ಆಯ್ಕೆಯಾಗಿರುವ ಎಲ್ಲರೂ ಕೋಟ್ಯಾಂತರ ರೂ. ಲಂಚವನ್ನು ನೀಡೆ ಬಂದಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಈಗಾಗಲೇ ಬಿಜೆಪಿ ಸರ್ಕಾರದ ಎಂಟು ಸಚಿವರು ಪಿ.ಎಸ್.ಐ.ಹಗರಣದಲ್ಲಿ ಭಾಗಿಯಾಗಿದ್ದು, ಸರ್ಕಾರ ಇದನ್ನು ಮುಚ್ವಿಹಾಕುವ ಪ್ರಯತ್ನದಲ್ಲಿದೆ. ಸಚಿವ ಅಶ್ವತ್ಥ ನಾರಾಯಣ ಅವರು ಕೆಲವು ಅಭ್ಯರ್ಥಿಗಳಿಂದ ತಲಾ 80 ಲಕ್ಷ ರೂ. ಲಂಚವನ್ನು ಪಡೆದಿರುವ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದರೂ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಮಾಡಿದ್ದಾರೆ' ಎಂದು ಕಿಡಿಕಾರಿದರು.

'ಈ ಎಲ್ಲಾ ಆರೋಪ ಮತ್ತು ಪ್ರಕಣಗಳನ್ನು ತನಿಖೆ ನಡೆಸಿ ರಾಜ್ಯದ ಜನರಿಗೆ ಸತ್ಯವನ್ನು ತಿಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ' ಎಂದು ಆಗ್ರಹಿಸಿದರು.

ಶಾಸಕ ಸಿ.ಟಿ.ರವಿ ವಿರುದ್ಧ ಎಂ.ಲಕ್ಷ್ಮಣ್ ಆಕ್ರೋಶ: 'ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಅವಾಚ್ಯಪದ ಬಳಕೆ ಮಾಡಿರುವ ಶಾಸಕ ಸಿ.ಟಿ.ರವಿಗೆ ಮಾನ ಮರ್ಯಾದೆ ಇದ್ದರೆ ತಮ್ಮದೇ ಪಕ್ಷ ಎಂಟು ಮಂತ್ರಿಗಳು ಒಂಬತ್ತು ಶಾಸಕರ ಲೈಂಗಿಕ ಹಗರಣದ ಸಿ.ಡಿ.ಬಿಡುಗಡೆ ವಿರುದ್ಧ ತಂದಿರುವ ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸಲಿ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.

'ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ ಸಚಿವರಾದ ಸುಧಾಕರ್, ಗೋಪಾಲಯ್ಯ ಮುಂತಾದ ಹನ್ನೆರಡು ಜನರ 13 ಗಂಟೆಗಳ ರಾಸಲೀಲೆಯ ವೀಡಿಯೋವನ್ನು ಬಿಡುಗಡೆ ಮಾಡಿದರೆ ಯಾರು ಕಚ್ಚೆಹರುಕರು ಎಂದು ಗೊತ್ತಾಗುತ್ತದೆ' ಎಂದು ಹೇಳಿದರು.

'ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ರಾಸಲೀಲೆಯ ವೀಡಿಯೋಗಳು ಸಹ ನಮ್ಮಲ್ಲಿವೆ. ಸಮಯ ಬಂದಾಗ ಇದೆಲ್ಲವನ್ನು ನಿಮ್ಮ ಬಿಜೆಪಿ ಕಚೇರಿಗೆ ಬಂದು ಬಿಡುಗಡೆ ಮಾಡುತ್ತೇವೆ'* ಎಂದು ಎಚ್ಚರಿಕೆ ನೀಡಿದರು.

'ಬಿಜೆಪಿಯಲ್ಲಿ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದ ಸಾಮಾಜಿಕ ಜಾಲತಾಣದಲ್ಲಿ ಜನ ನೋಡುತ್ತಿದ್ದಾರೆ. ನಿಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೂಪಿಸುವುದು ಖಂಡನೀಯ' ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News