ಇವತ್ತೇ ಮಂತ್ರಿ ಆಗು ಎಂದರೆ ನಾನು ಸಿದ್ಧನಾಗಿದ್ದೇನೆ: ಕೆ.ಎಸ್. ಈಶ್ವರಪ್ಪ

Update: 2022-09-17 13:21 GMT

ಶಿವಮೊಗ್ಗ, ಸೆ.17: 'ಆರೋಪ ಮುಕ್ತನಾದರೂ ಸಚಿವ ಸ್ಥಾನ ನೀಡುವುದಕ್ಕೆ ಕೇಂದ್ರ ಮತ್ತು ರಾಜ್ಯ ನಾಯಕರು ಯಾಕೆ ಹಿಂದೆ-ಮುಂದೆ ನೋಡುತ್ತಿದ್ದಾರೋ ಗೊತ್ತಿಲ್ಲ' ಎನ್ನುವ ಮೂಲಕ ಮಾಜಿ ಡಿಸಿಎಂ, ಶಾಸಕ ಕೆ.ಎಸ್. ಈಶ್ವರಪ್ಪ (K. S. Eshwarappa) ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರೋಪಮುಕ್ತನಾಗಿದ್ದರೂ ಇನ್ನೂ ನನಗೆ ಸಚಿವ ಸ್ಥಾನ ನೀಡದಿರುವುದು ಏಕೆಂದು ಗೊತ್ತಿಲ್ಲ. ಇವತ್ತೇ ಮಂತ್ರಿ ಆಗು ಎಂದರೆ ನಾನು ಸಿದ್ಧವಾಗಿದ್ದೇನೆ. ಆದರೆ, ಅದು ನನ್ನ ಕೈಯಲ್ಲಿಲ್ಲ. ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಕೇಂದ್ರದ ನಾಯಕರು ತೀರ್ಮಾನ ಮಾಡಬೇಕಿದೆ. ಎಷ್ಟು ಖಾತೆ ಇದೆಯೋ ಅದನ್ನು ಭರ್ತಿ ಮಾಡಬೇಕಿದೆ. ಆದರೆ, ಯಾಕೋ ಮೀನಮೇಷ ಎಣಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದರು.

ಆರೋಪ ಮುಕ್ತನಾದರೂ ನನಗೆ ಸಚಿವ ಸ್ಥಾನ ನೀಡದಿರುವುದರ ಬಗ್ಗೆ ನಾಯಕರನ್ನೇ ಕೇಳಿ. ನನ್ನನ್ನು ಕೇಳಿದರೆ ನಾನೇನು ಹೇಳಲಿ. ನಾನು ಇಂದೇ ಮದುವೆ ಗಂಡಾಗಲೂ ತಯಾರಿದ್ದೇನೆ. ತೀರ್ಮಾನ ಮಾಡಬೇಕಾದವರು ನಾಯಕರು. ನಾನು ಈ ಬಗ್ಗೆ ಯಾರನ್ನೂ ಭೇಟಿಯಾಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

ನನ್ನ ಮೇಲೆ ಆಪಾದನೆ ಬಂದಾಗ ನಮ್ಮ ಮನೆ ದೇವ್ರು ಚೌಡೇಶ್ವರಿ ನನ್ನನ್ನು ಆರೋಪಮುಕ್ತನನ್ನಾಗಿ ಮಾಡುವುದಾಗಿ ಹೇಳಿದ್ದೆ. ಅದೇ ರೀತಿ ಆಗಿದೆ. ಬೇರೆ ಕೇಸ್ ಗಳಿಗೂ ನನ್ನ ಪ್ರಕರಣಕ್ಕೂ ಹೋಲಿಕೆ ಮಾಡಲಾಗದು. ಹಾಗಾಗಿ ಆರೋಪ ಮುಕ್ತನಾಗಿರುವುದರಿಂದ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆನ್ನುವುದು ನನ್ನ ಅಪೇಕ್ಷೆಯಾಗಿದೆ. ಯಾವ ಕಾರಣಕ್ಕೆ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎನ್ನುವುದು ನನಗೆ ಗೊತ್ತಿಲ್ಲ ಎಂದರು.

'ವೈಭವೀಕರಿಸಿದ ಯಾವುದೇ ಹುಟ್ಟುಹಬ್ಬ ಆಚರಿಸಬಾರದು ಎಂದು ಬಿಜೆಪಿ ಹೇಳಿರುವುದು ಬೇರೆ ಪಕ್ಷಗಳಿಗೆ ಮಾದರಿಯಾಗಿದೆ. ಸಿದ್ದರಾಮಯ್ಯ ಅವರು 75 ನೇ ಹುಟ್ಟುಹಬ್ಬಕ್ಕೆ 75 ಕೋಟಿ ರೂ. ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಉತ್ಸವದಲ್ಲಿ ವ್ಯಕ್ತಿ ವೈಭವೀಕರಣ ಮಾಡಿದ್ದರು. ಆದರೆ, ವಿಶ್ವನಾಯಕ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಪ್ರತಿ ಬಡವರಿಗೂ ಅನುಕೂಲವಾಗಲೆಂದು ಸೇವಾ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡವರ ಪರವಾಗಿ ಬಿಜೆಪಿ ಇದೆ ಎಂದು ತೋರಿಸಿಕೊಳ್ಳಲು ಇಂತಹ ಸೇವಾ ಕಾರ್ಯ ಕೈಗೊಳ್ಳಲಾಗಿದೆ' ಎಂದರು.

'ಹಿಂದುಳಿದ ವರ್ಗದ ಮತ ನನ್ನೊಬ್ಬನ ಮುಖ ನೋಡಿ ಬರಲ್ಲ. ಬಿಜೆಪಿಯೊಂದಿಗೆ ದಲಿತರು, ಹಿಂದುಳಿದ ವರ್ಗದವರು, ಮುಂದುವರೆದವರು ಎಲ್ಲರೂ ನಮ್ಮ ಜೊತೆಗೆ ಇರುವುದರಿಂದಲೇ ಬಿಜೆಪಿ ಹೆಚ್ಚಿನ ಸ್ಥಾನ ಪಡೆದಿದೆ. ಇನ್ನೂ ಹೆಚ್ಚಿನ ಸ್ಥಾನ ಗಳಿಸಲು ನಮ್ಮ ನಾಯಕರು ಚಿಂತನೆ ಮಾಡುತ್ತಾರೆ' ಎಂದರು.

'ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾನು ತಯಾರಿಸಿದ ಪಟ್ಟಿಯನ್ನು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೂ ತೋರಿಸಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಪಾದಯಾತ್ರೆಗೆ 5 ಸಾವಿರ ಜನರನ್ನು ಕರೆತನ್ನಿ ಅಂದ್ರೆ ಆಗಲ್ಲ ಎಂದು ಆರ್.ವಿ. ದೇಶಪಾಂಡೆ ಹೇಳಿದ್ದಾಗಿ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಹೇಳ್ತಾರೆ. ಇದು ಕಾಂಗ್ರೆಸ್ ಪರಿಸ್ಥಿತಿ. ಒಬ್ಬ ಶಾಸಕಾಂಗ ಪಕ್ಷದ ನಾಯಕನಿಗೂ ಪಟ್ಟಿ ತೋರಿಸಲ್ಲ ಅಂದ್ರೆ ಅದೊಂದು ಪಾರ್ಟಿ ಅಂತ ಕರಿತೀರಾ? ಬಿಜೆಪಿ ತಾಯಿ ಸ್ವರೂಪ. ಇಲ್ಲಿ ಎಲ್ಲವನ್ನೂ ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡಲಾಗುವುದು' ಎಂದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News