ಕೇಂದ್ರ ಸರಕಾರ ಬಡವರ ರಕ್ತ ಹೀರುತ್ತಿದೆ: ಸಿದ್ದರಾಮಯ್ಯ ವಾಗ್ದಾಳಿ

Update: 2022-09-17 16:08 GMT

ಮಂಡ್ಯ, ಸೆ.17: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಡವರ ರಕ್ತ ಹೀರುತ್ತಿದೆ. ಹಾಲು ಮತ್ತು ನೀರಿಗೆ ವ್ಯತ್ಯಾಸವಿಲ್ಲದ ಹಾಗೆ ಬೆಲೆ ಇದೆ. ಜಿಎಸ್‌ಟಿ ಎಂಬುವುದನ್ನು ಕಡ್ಲೆಪುರಿಗೂ ಬಿಟ್ಟಿಲ್ಲ ಈ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ಸುಮಾರವಿ ಕನ್ಷೇನ್ಷನ್‌ ಹಾಲ್‌ನಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಹುಲ್‌ ಗಾಂಧಿ ಅವರು ಆರಂಭಿಸಿರುವ ಭಾರತ್‌ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಬಿಜೆಪಿಯವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಯುವ ಕೆಲಸ ಮಾಡುತ್ತಿದ್ದಾರೆ. ಜನರ ನಡುವೆ ವಿಷ ಹಾಕಿ ಮನಸುಗಳನ್ನು ಇಬ್ಬಾಗ ಮಾಡುತ್ತಿದ್ದಾರೆ. ಮನುಸ್ಮೃತಿ ಮೇಲೆ ನಂಬಿಕೆ ಇಟ್ಟುಕೊಂಡಿರುವ ಇವರಿಗೆ, ದೇಶದ ಸಂವಿಧಾನ, ಪ್ರಜಾಸತ್ತಾತ್ಮಕ ಬಗ್ಗೆ ಗೌರವವಿಲ್ಲ ಎಂದು ಅವರು ಆರೋಪಿಸಿದರು.

ಮಹಾತ್ಮ ಗಾಂಧೀಜಿ ಅವರನ್ನ ಕೊಂದ ಗೋಡ್ಸೆ ಅವರ ಫೋಟೋ ಹಾಕಿಕೊಂಡು ಮೆರವಣಿಗೆ ಮಾಡುವ ಇಂತಹ ಮಾನಗೆಟ್ಟವರು, ಜೊತೆಗೆ ಸಾವರ್ಕರ್‌ನನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. ಇಷ್ಟೆಲ್ಲ ನಡೆಯುತ್ತಿರುವಾಗ ದಲಿತರು, ಅಲ್ಪಸಂಖ್ಯಾತರು, ಬಡವರನ್ನು ಇವರು ಹೇಗೆ ಬದುಕಲು ಬಿಡುತ್ತಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌ ಎಲ್ಲವೂ ಉಚಿತವಾಗಿ ಕೊಡುವುದಿಲ್ಲ. ಬಡವರ ರಕ್ತ ಕುಡಿಯುತ್ತಿದ್ದಾರೆ. ಹಾಲು, ಮಜ್ಜಿಗೆ, ಅವಲಕ್ಕಿ, ಕಡ್ಲೆಪುರಿ, ಮಂಡಕ್ಕಿಗೆಲ್ಲ ತೆರಿಗೆ ಹಾಕಿದರು. ಇವರು ಮನುಷ್ಯರೋ ರಾಕ್ಷಸರೋ ಗೊತ್ತಾಗುತ್ತಿಲ್ಲ. ಸಮಸ್ಯೆಗಳನ್ನು ದೇಶ ಕಿತ್ತು ತಿನ್ನುತ್ತಿದೆ. ನಿರುದ್ಯೋಗ, ಬಡತನ, ಅಶಾಂತಿ ತಾಂಡವವಾಡುತ್ತಿದೆ. ಇದೆಲ್ಲವನ್ನು ಜೋಡಿಸಲು ಭಾರತ ಐಕ್ಯತಾ ಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

 ಸ್ವಾತಂತ್ರ್ಯ ನಂತರ ದೇಶದಲ್ಲಿ ಇಂತಹ ಐತಿಹಾಸಿಕ ಪಾದಯಾತ್ರೆಯನ್ನು ನಡೆಸಲು ಇದುವರೆಗೆ ಯಾವ ನಾಯಕರಿಂದಲೂ, ಪಕ್ಷದಿಂದಲೂ ಸಾಧ್ಯವಾಗಿಲ್ಲ. 3570 ಕಿಲೋಮೀಟರ್ 150 ದಿನ ಪಾದಯಾತ್ರೆ ನಡೆಸುವುದೆಂದರೆ ಸುಲಭದ ಕೆಲಸವಲ್ಲ. ಆದರೆ, ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿಯವರು ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.

ಪಾದಯಾತ್ರೆ ರಾಜ್ಯದಲ್ಲಿ 22 ದಿನ ನಡೆಯುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಮೂರು ದಿನ ಅಂದರೆ, ಅಕ್ಟೋಬರ್ 3, 6, 7ರಂದು ನಡೆಯುತ್ತದೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕನಿಷ್ಠ ಒಂದು ದಿನವಾದರೂ ಪಾದಯಾತ್ರೆಯಲ್ಲಿ ಭಾಗವಹಿಸಲೇಬೇಕು ಎಂದು ಅವರು ಕರೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ದಿನೇಶ್‌ ಗೂಳಿಗೌಡ, ಮಧು ಜಿ.ಮಾದೇಗೌಡ, ಕಾಂಗ್ರೆಸ್‌ ಮುಖಂಡರಾದ ಎಂ.ಎಸ್‌.ಆತ್ಮಾನಂದ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಧ್ರುವನಾರಾಯಣ್‌, ಕೆ.ಬಿ.ಚಂದ್ರಶೇಖರ್‌, ಬಿ.ರಾಮಕೃಷ್ಣ, ಡಾ.ಕೃಷ್ಣ, ದಡದಪುರದ ಶಿವಣ್ಣ, ಗಣಿಗ ರವಿಕುಮಾರ್‌ಗೌಡ, ಡಾ.ರವೀಂದ್ರ, ಹಾಲಹಳ್ಳಿ ರಾಮಲಿಂಗಯ್ಯ, ಸಿ.ಡಿ.ಗಂಗಾಧರ್, ಸಿ.ಎಂ.ದ್ಯಾವಪ್ಪ ಇತರರು ಉಪಸ್ಥಿತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News