ಬಳ್ಳಾರಿಯ ವಿಮ್ಸ್ ನಲ್ಲಿ ರೋಗಿಗಳ ಸಾವು, ತಪ್ಪಿತಸ್ಥರ ವಿರುದ್ಧ ಕ್ರಮ: ಸಚಿವ ಡಾ.ಕೆ.ಸುಧಾಕರ್

Update: 2022-09-17 17:40 GMT

ಬೆಂಗಳೂರು, ಸೆ.17: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಸಾವಿಗೀಡಾದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಈ ಘಟನೆಗೆ ಯಾರಾದರೂ ಕಾರಣವಾಗಿದ್ದರೆ, ಅಂತಹ ತಪ್ಪಿತಸ್ಥರ ವಿರುದ್ಧ ನೂರಕ್ಕೆ ನೂರು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶನಿವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವಿಗೀಡಾದ ಕೂಡಲೇ ಡಾ.ಸ್ಮಿತಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಅವರು ನಿನ್ನೆ ಇಡೀ ದಿನ ಆಸ್ಪತ್ರೆಯಲ್ಲಿದ್ದು ಮಾಹಿತಿ ಪಡೆದಿದ್ದಾರೆ ಎಂದರು.

ಇನ್ನೂ ಕೆಲ ಎಲೆಕ್ಟ್ರಿಕ್ ಎಂಜಿನಿಯರ್‍ಗಳನ್ನು ಅಲ್ಲಿಗೆ ಕರೆದೊಯ್ಯಬೇಕು ಎಂದು ಸಮಿತಿಯವರು ಹೇಳಿದ್ದು, ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿ ಈ ಕುರಿತ ವರದಿ ಬರಲಿದೆ. ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ಈ ದುರ್ಘಟನೆಯಿಂದಾಗಿ ನಮಗೂ ನೋವಾಗಿದೆ. ಸಾವಿಗೀಡಾದ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಆದರೂ ಸರಕಾರದಿಂದ ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ನೊಂದವರ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ನಾಳೆ ನಾನೇ ಬಳ್ಳಾರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಿದ್ದೇನೆ. ಸರಕಾರ ಯಾವುದೇ ಅಂಶವನ್ನು ಮುಚ್ಚಿಡುವುದಿಲ್ಲ. ಪ್ರತಿಯೊಬ್ಬರ ಜೀವವೂ ಸರಕಾರಕ್ಕೆ ಬಹಳ ಮುಖ್ಯ ಎಂದು ಸುಧಾಕರ್ ಹೇಳಿದರು.

ಯಾವುದೇ ಶಾಸಕರು ಹೇಳಿದಾಕ್ಷಣ ಆಸ್ಪತ್ರೆಗೆ ನಿರ್ದೇಶಕರನ್ನು ನೇಮಿಸಲು ಸಾಧ್ಯವಿಲ್ಲ. ನಿರ್ದೇಶಕರನ್ನು ನೇಮಿಸಲು ಕೆಲ ನಿಯಮಗಳಿರುತ್ತವೆ. ಅರ್ಹರನ್ನು ಮಾತ್ರ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಕರುಣಾಕರ ರೆಡ್ಡಿ, ಸಚಿವ ಶ್ರೀರಾಮುಲು, ಸಚಿವ ಆನಂದ್ ಸಿಂಗ್ ಎಲ್ಲರೂ ಬಳ್ಳಾರಿಯಲ್ಲಿದ್ದಾರೆ. ಈ ಪ್ರಕ್ರಿಯೆ ಹೇಗೆ ನಡೆದಿದೆ ಎಂಬುದು ಅವರೆಲ್ಲರಿಗೂ ಗೊತ್ತಿದೆ. ಇದರಲ್ಲಿ ರಾಜಕಾರಣ ಮಾಡುವವರ ಘನತೆಯೇ ಕಡಿಮೆಯಾಗುತ್ತದೆ. ಇಂತಹ ವಿಚಾರದಲ್ಲಿ ಆರೋಪ ಮಾಡುವುದು ಬಹಳ ಸುಲಭ.

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News