ದೇಶದಲ್ಲಿ ಅಸಹಿಷ್ಣುತೆ ಮತ್ತಷ್ಟು ಹೆಚ್ಚಳ: ಬಾಗೇಪಲ್ಲಿಯಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್

Update: 2022-09-18 14:06 GMT
photo- twitter@pinarayivijayan

ಬಾಗೇಪಲ್ಲಿ: 'ದೇಶದಲ್ಲಿ ಅಸಹಿಷ್ಣು ವಾತಾವರಣ ತಾಂಡವವಾಡುತ್ತಿದ್ದು ಪ್ರಶ್ನೆ ಮಾಡುವ ಎಲ್ಲಾ ಪ್ರಗತಿಪರರನ್ನು ಕೋಮುವಾದಿಗಳು ಕೊಲ್ಲುತ್ತಿದ್ದಾರೆ'  ಎಂದು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ರಸ್ತೆ ಸಾರಿಗೆ ಡಿಪೋ ರಸ್ತೆಯ ಪಕ್ಕದ ಕೆ.ಎಚ್.ಬಿ. ಲೇಔಟ್ ಮೈದಾನದಲ್ಲಿ ಸಿಪಿಎಂ ಪಕ್ಷದಿಂದ ಏರ್ಪಡಿಸಿದ್ದ ಸೌಹಾರ್ದ ಸಮೃದ್ಧ ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ರಾಜಕೀಯ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

'ಪ್ರಧಾನಿಗ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಮತ್ತು ಅವರ ಅಂಗ ಸಂಸ್ಥೆಯಾದ ಆರೆಸ್ಸೆಸ್ ವಿರುದ್ಧ ಮಾತನಾಡಿದ ಪ್ರಗತಿಪರ ಚಿಂತಕರಾದ ದಾಬೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಮತ್ತಿರರನ್ನು ಕೋಮುವಾದಿಗಳಾದ ಸಂಘಪರಿವಾರದವರು ಗುಂಡಿಕ್ಕಿ ಕೊಂದಿದ್ದಾರೆ ಮುಂದಿನ ಸರದಿ ಕೆ.ಎಸ್.ಭಗವಾನ್ ಅವರನ್ನು ಕೊಳ್ಳಲು ಪಣ ತೊಡುತ್ತಿದ್ದಾರೆ,  ಅದೇ ರೀತಿಯಲ್ಲಿ ಡಬಲ್ ಇಂಜಿನ್ ಸರಕಾರಗಳ ವಿರುದ್ಧ ಪ್ರಶ್ನೆ ಮಾಡುವವರ ವಿರುದ್ಧವೂ ದೇಶದ್ರೋಹ ಪ್ರಕರಣಗಳನ್ನು ದಾಖಲು ಮಾಡಿ ಜೈಲಿಗೆ ಅಟ್ಟುತ್ತಿದ್ದಾರೆ' ಎಂದು ಕಿಡಿಕಾರಿದರು. 

'ರಾಜ್ಯದಲ್ಲೂ ಇದೇ ಮುಂದುವರಿದಿದ್ದು ಕರಾವಳಿಯಲ್ಲಿ ಕೋಮುವಾದಿಗಳ ಅಟ್ಟಹಾಸಕ್ಕೆ 4 ಜನ ಅಮಾಯಕ ಯುವಕರು ಬಲಿಯಾಗಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನ್ನ ಪಕ್ಷದ ಕಾರ್ಯಕರ್ತನ ಮನೆಗೆ ಮಾತ್ರ ಹೋಗಿ 50 ಲಕ್ಷ ರೂ. ಗಳ ಪರಿಹಾರ ನೀಡಿ ಉಳಿದ ಅಲ್ಪಂಖ್ಯಾತರ ಮನೆಗೆ ಹೋಗದೆ ಕನಿಷ್ಠ ಪರಿಹಾರ ನೀಡದೆ ವಾಪಸ್ ಬಂದಿದ್ದಾರೆ.  ಇಂತಹ ಮುಖ್ಯಮಂತ್ರಿಗಳು ನಿಮಗೆ ಬೇಕಾ? ಎಂದು ಪ್ರಶ್ನಿಸಿದ ಅವರು,  ಬಾಗೇಪಲ್ಲಿ ಕ್ಷೇತ್ರದಲ್ಲಿ  ಸಿಪಿಎಂ ಪಕ್ಷದಿಂದ 3 ಬಾರಿ ವಿಧಾನ ಸಭೆಗೆ ಶಾಸಕರಾಗಿ ಆಯ್ಕೆಯಾಗಿ ಒಳ್ಳೆಯ ಅಭಿವೃದ್ದಿ ಪಡಿಸಿದ್ದಾರೆ, ಮುಂಬರುವ ವಿದಾನಸಭೆಗೆ ಸಿಪಿಎಂ ಪಕ್ಷದಿಂದ ಆಯ್ಕೆ ಮಾಡಿ ಕಳುಹಿಸಿದರೆ ಈ ಕ್ಷೇತ್ರ ಅಭಿವೃದ್ಧಿಯಾಗುತ್ತದೆ' ಎಂದರು.

ಪ್ರಜಾ ವೈದ್ಯ ಡಾ.ಅನಿಲ್‍ಕುಮಾರ್ ಆವುಲಪ್ಪ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಇನ್ನು ಮೇಲೆ ಸಿಪಿಎಂ ಪಕ್ಷ ಇರುವುದಿಲ್ಲ ಎಂದು ನಮ್ಮ ಶತ್ರು ಪಕ್ಷಗಳು ಹೇಳಿಕೊಂಡು ತಿರುಗಾಡುತ್ತಿವೆ ಆದರೆ ಇಂದು ಇಷ್ಟೊಂದು ಜನರು ಬರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ನಾವು ಯಾವುದೇ ಕಾರ್ಯಕರ್ತನಿಗೆ ಹಣ ನೀಡಿಲ್ಲ ನೀಡುವುದು ಇಲ್ಲ ನಮ್ಮ ಬಲ ಹೋರಾಟ ಮಾಡುವುದು ನಾವು ಕೇವಲ ಹಳ್ಳಿಗಳಿಗೆ ತೆರಳಿ ರಾಜಕೀಯ ಸಮಾವೇಶಕ್ಕೆ ಬರಬೇಕು ಎಂದು ಮನವಿ ಮಾಡಿದ್ದೆವು ಆದರೆ ಇಂದು ನಮ್ಮ ಶತ್ರುಗಳಿಗೆ ನಮ್ಮ ತಾಕತ್ತು ಏನು ಎಂಬುದು ಈಗ ಗೋತ್ತಾಗಿದೆ ಎಂದರು.

ಇದಕ್ಕೂ ಮೊದಲು ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕಿಗಳಿಂದ ಸಾವಿರಾರು ಜನರು ಪಟ್ಟಣದ ನ್ಯಾಷನಲ್ ಕಾಲೇಜು ಮುಂಭಾಗದಿಂದ ಪ್ರವಾಸಿ ಮಂದಿರದವರೆಗೂ ಮುಖ್ಯ ರಸ್ತೆ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ವೇದಿಕೆಯ ಬಳಿ ತೆರಳಿದರು. 

ಕಾರ್ಯಕ್ರಮದಲ್ಲಿ ಸಿಪಿಎಂ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರಾದ ಎಂ.ಎಂ.ಬೇಬಿ, ಬಿ.ವಿರಾಘವುಲು, ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ರಾಜ್ಯ ಸಮಿತಿ ಸದಸ್ಯ ಕೆ.ಎನ್.ಉಮೇಶ್, ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಮುಖಂಡರಾದ ವರಲಕ್ಷ್ಮಿ, ಕೆ.ನೀಲಾ, ಹೆಚ್.ಪಿ.ಲಕ್ಷ್ಮಿನಾರಾಯಣ, ಪಿ.ಮಂಜುನಾಥರೆಡ್ಡಿ, ಮೊಹಮದ್ ಅಕ್ರಂ, ಬಿ,ಸಾವಿತ್ರಮ್ಮ ಬಿಳ್ಳೂರು ನಾಗರಾಜು, ಎಂ.ಎನ್.ರಘುರಾಮರೆಡ್ಡಿ, ಜಯರಾಮರೆಡ್ಡಿ, ಸಿದ್ದಗಂಗಪ್ಪ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News