ತುಮಕೂರು: ಸ್ಮಶಾನ ಜಾಗ ಇಲ್ಲದ್ದಕ್ಕೆ ರಸ್ತೆಯಲ್ಲಿ ದಲಿತ ಮಹಿಳೆಯ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು

Update: 2022-09-18 14:31 GMT

ತುಮಕೂರು: ಅನಾರೋಗ್ಯದಿಂದ ಸಾವನ್ನಪ್ಪಿದ್ದ ದಲಿತ ಮಹಿಳೆಯ ಅಂತ್ಯಸಂಸ್ಕಾರ ನಡೆಸಲು ಸ್ಮಶಾನ ಜಾಗ ಇಲ್ಲದ್ದಕ್ಕೆ ಗ್ರಾಮಸ್ಥರು ರಸ್ತೆಯಲ್ಲೇ ಮೃತದೇಹವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಬಿಜಾವರ ಗ್ರಾಮದಲ್ಲಿ ನಡೆದಿದೆ. 

ಬಿಜಾವರ ಗ್ರಾಮ ಹನುಮಕ್ಕ(75) ಎಂಬ ಮಹಿಳೆ ಇಂದು ( ರವಿವಾರ) ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಹನುಮಕ್ಕ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಥಳವಾಗಲಿ, ಸರಕಾರಿ ರುದ್ರಭೂಮಿಯಾಗಲಿ ಇಲ್ಲದೆ ಇರುವುದರಿಂದ ಗ್ರಾಮಸ್ಥರು  ರಸ್ತೆಯಲ್ಲೇ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. 

ಗ್ರಾಮಕ್ಕೆ ರುದ್ರಭೂಮಿ  ಮಂಜೂರು ಮಾಡುವಂತೆ  ಹಲವಾರು ಬಾರಿ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

'ಬಿಜವಾರ ಗ್ರಾಮದಲ್ಲಿ ಸುಮಾರು 350 ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಾಗಿದ್ದು ಹೆಣ ಹೂಳಲು ಅಂಗೈ ಅಗಲ ಜಾಗವಿಲ್ಲದ ಕಡುಬಡವರಿದ್ದಾರೆ. ಈ ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಇವರಿಗೆ ಶವ ಸಂಸ್ಕಾರಕ್ಕೂ ಜಾಗ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.ತಾಲೂಕು ಆಡಳಿತ ಕಾಟಾಚಾರಕ್ಕೆ ದಲಿತರ ಕುಂದು ಕೊರತೆ ಸಭೆಗಳನ್ನ ನಡೆಸುತ್ತಿದ್ದಾರೆ. ಸಭೆಗಳಲ್ಲಿ ರುದ್ರಭೂಮಿ ಮುಂಜೂರು ಮಾಡುವುದಾಗಿ ಹೇಳಿ ದಲಿತರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮದುಗಿರಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ದಲಿತರ ಸ್ಮಶಾನಗಳಿಗೆ ಜಮೀನು ಮಂಜೂರು ಮಾಡಬೇಕು' ಎಂದು ಒತ್ತಾಯಿಸಿದ ಮದುಗಿರಿ ದಲಿತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಹನುಮಂತರಾಜು ಆಕ್ರೋಶ ವ್ಯಕ್ತ ಪಡಿಸಿದರು. 

ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ಅವರು ಅಂತಿಮವಾಗಿ ಒಂದು ಎಕರೆ ಭೂಮಿ ಮಂಜೂರು ಮಾಡಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News