ಓ ಮೆಣಸೇ ...

Update: 2022-09-18 19:30 GMT

ರಾಜ್ಯ ಹಾಗೂ ದೇಶದಲ್ಲಿ ಸುಳ್ಳು ಸುದ್ದಿ ಹರಡಲು ಬಿಜೆಪಿಯಿಂದ ಸಾಮಾಜಿಕ ಜಾಲತಾಣ ಬಳಸಿಕೊಳ್ಳಲಾಗುತ್ತಿದೆ - ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಸುಳ್ಳಿನ ವಿಷಯದಲ್ಲಿ ಅವರು ಜಗತ್ತಿನ ಯಾವ ವೇದಿಕೆಯನ್ನು ತಾನೇ ಬಳಸದೆ ಬಿಟ್ಟಿದ್ದಾರೆ?

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ಸಿಗುವುದಿಲ್ಲ -ಗುಲಾಂ ನಬಿ ಆಝಾದ್, ಮಾಜಿ ಕಾಂಗ್ರೆಸ್ ನಾಯಕ
ನೀವು 'ಆಝಾದ್' ಸ್ಥಾನವನ್ನು ಮಾರಿ ಗಳಿಸಿಕೊಂಡ 'ಗುಲಾಮ್' ಎಂಬ ಕಳಂಕದಿಂದ ಮುಕ್ತರಾಗುವ ಕುರಿತು ಚಿಂತಿಸಿ.

2023ರದ್ದು ನಮ್ಮ ಪಾಲಿಗೆ ಕೊನೆಯ ಚುನಾವಣೆ - ನಿಖಿಲ್ ಕುಮಾರಸ್ವಾಮಿ, ಯುವ ಜೆಡಿಎಸ್ ಅಧ್ಯಕ್ಷ
ಅಂದರೆ ಮುಂದೆ ಪ್ರಾಕ್ಸಿ ಪಾತ್ರಗಳನ್ನೆಲ್ಲಾ ಬಿಟ್ಟು ನೇರವಾಗಿ ಬಿಜೆಪಿಯ ಅಭ್ಯರ್ಥಿಗಳಾಗಿ ರಂಗಕ್ಕೆ ಬರುತ್ತೀರಾ?

ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಮುರ್ಮು ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ- ಬಸವರಾಜ ಬೊಮ್ಮಾಯಿ, ಸಿಎಂ
ಮೋದಿ ಮಹಾಶಯರು ಬರುವುದಿಲ್ಲ ಎಂದು ಖಚಿತವಾದದ್ದಕ್ಕೆ ಅಷ್ಟೊಂದು ಸಂಭ್ರಮಿಸಬೇಕೇ?

ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಬಿಟ್ಟು ಒಬ್ಬೊಬ್ಬರಾಗಿ ಪಕ್ಷ ಬಿಡುತ್ತಿರುವ ನಾಯಕರನ್ನು ಜೋಡಿಸುವ ಕೆಲಸ ಮಾಡಲಿ - ಶ್ರೀರಾಮುಲು, ಸಚಿವ
ಸದ್ಯ ರಾಹುಲ್ ಗಾಂಧಿಯವರು, ಹಿಂಬಾಗಿಲಲ್ಲಿ ಬಂದು ತಮ್ಮ ಪಕ್ಷದ ಕದ ತಟ್ಟುತ್ತಿರುವ ನಿಮ್ಮಂತಹ ಎಡಬಿಡಂಗಿಗಳ ಸತ್ಕಾರದಲ್ಲಿ ನಿರತರಾಗಿದ್ದಾರೆ.

 ಸಮಾಜದ ದುರ್ಬಲ ವರ್ಗದವರಿಗೆ ಅನುಕೂಲವಾಗುವ ದಿಸೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಬಳಿಕ ಭಾರತಕ್ಕೆ ದುರ್ಬಲ ಪ್ರಧಾನಿ ಹಾಗೂ ಮಿತ್ರ ಪಕ್ಷಗಳ ಕಿಚಡಿ ಸರಕಾರ ಬೇಕಿದೆ - ಅಸದುದ್ದೀನ್ ಉವೈಸಿ, ಎಂಐಎಂ ಮುಖ್ಯಸ್ಥ
ಎಷ್ಟೇ ದುರ್ಬಲನಾಗಿದ್ದರೂ ಪರವಾಗಿಲ್ಲ, ಅವಿದ್ಯಾವಂತ ಹಾಗೂ ವಿವೇಕಹೀನನಾಗಿರಬಾರದು.

ಶಿವಮೊಗ್ಗದ ಹರ್ಷ ಕೊಲೆ ಕೇಸ್‌ನಲ್ಲಿ ಪಾಕಿಸ್ತಾನದ ಜೈಶೆ ಮುಹಮ್ಮದ್ ಲಿಂಕ್ ಇದ್ದುದರಿಂದ ಸೆಕ್ಷನ್ ಸ್ಟ್ರಾಂಗ್ ಮಾಡಬೇಕಾಯಿತು - ಆರಗ ಜ್ಞಾನೇಂದ್ರ, ಸಚಿವ

ಆ ಜೈಶೆ ಮುಹಮ್ಮದ್ ಮುಠ್ಠಾಳರು ಶಿವಮೊಗ್ಗಕ್ಕೆ ಬಂದು ಕಾರ್ಯಾಚರಣೆ ನಡೆಸಬೇಕಿದ್ದರೆ ರಾಜ್ಯದ ಆಡಳಿತ ನಡೆಸುತ್ತಿರುವವರು ಎಂತಹ ಪರಮ ಮುಠ್ಠಾಳರಾಗಿರಬೇಕು!

    ಕಾಂಗ್ರೆಸ್ ಪಕ್ಷ ಮತ್ತು ನನ್ನನ್ನು ಹೆದರಿಸಲು ಬಿಜೆಪಿಯವರು ಮುಂದಾಗಿದ್ದು, ನಾನು ಯಾವುದಕ್ಕೂ ಹೆದರುವವನಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

    ನೀವು ಹೀಗೆಲ್ಲ ಸ್ಪಷ್ಟೀಕರಣ ಕೊಡಲಾರಂಭಿಸಿದರೆ ನೀವು ಹೆದರಿಕೊಂಡಿರುವುದು ಜಗತ್ತಿಗೆಲ್ಲಾ ಗೊತ್ತಾಗಿ ಬಿಡುತ್ತದೆ.

ಹಿಂದಿಯಲ್ಲಿ ಮಾತನಾಡುವಾಗ ನಾನು ನಡುಗುತ್ತೇನೆ ಹಾಗೂ ಹಿಂಜರಿಯುತ್ತೇನೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

ನೀವು ಯಾವುದೇ ಭಾಷೆಯಲ್ಲಿ ಮಾತನಾಡಲು ಹೊರಟರೂ ಇನ್ನು ಬೆಲೆ ಏರುವುದು ಖಚಿತ ಎಂದು ಜನರು ಅಂಜಿ ನಡುಗಲಾರಂಭಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಮೂರು ಕೋಟಿ ಗಿಡಗಳನ್ನು ನೆಡಲಾಗುವುದು- ನಿತಿನ್ ಗಡ್ಕರಿ, ಕೇಂದ್ರ ಸಚಿವ

ಸದ್ಯದ ಆರ್ಥಿಕ ನೀತಿಯಿಂದಾಗಿ ಬೀದಿಗೆ ಬರಲಿರುವ ಕೋಟ್ಯಂತರ ಭಾರತೀಯರಿಗೆ ನೆರಳು ಒದಗಿಸಲು ಅಷ್ಟು ಮರಗಳು ಸಾಕೇ?

ಮೀಸಲಾತಿ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಕೆಲವು ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ - ಕೆ.ಎಸ್. ಈಶ್ವರಪ್ಪ, ಶಾಸಕ

ಈ ಹೀನಾಯ ಸ್ಥಿತಿಯಲ್ಲೂ ನೀವು ಚಿರಂಜೀವಿ ಎಂಬಂತೆ ನಟಿಸುತ್ತಿರುವುದನ್ನು ಕಂಡು ಅವರು ಸ್ಫೂರ್ತಿ ಪಡೆದಿರಬೇಕು.

ಗೋಹತ್ಯೆ ನಿಷೇಧ ಕಾಯ್ದೆ ಪಾಲನೆ ಮಾಡಲು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವ ಚಿಂತನೆ ಸರಕಾರದ ಮುಂದಿದೆ - ಪ್ರಭು ಚವ್ಹಾಣ್, ಸಚಿವ
ಅದಕ್ಕಾಗಿ ಕೆಲವು ಹೋರಿಗಳಿಗೆ ತರಬೇತಿ ನೀಡಿ ಈಗಾಗಲೇ ಬೀದಿಗೆ ಬಿಟ್ಟಿದ್ದೀರೆಂಬ ವದಂತಿಗಳಿವೆಯಲ್ಲ?

ನರೇಂದ್ರ ಮೋದಿಯ ನಂತರ ಹಿಂಬಾಗಿಲಿನಿಂದ ಸೋನಿಯಾ ಗಾಂಧಿಯವರನ್ನು ಪ್ರಧಾನಿ ಮಾಡಲು ಬಿಜೆಪಿ ಯೋಜಿಸುತ್ತಿದೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ

 ಆರೆಸ್ಸೆಸ್‌ನವರು ನಿಮ್ಮನ್ನು ಮೋದಿಯವರ ಉತ್ತರಾಧಿಕಾರಿಯಾಗಿಸುವ ಸಿದ್ಧತೆಯಲ್ಲಿದ್ದಾರಂತೆ?

    ಕನಸುಗಳನ್ನು ಮಾರುವಾತ ಗುಜರಾತ್‌ನಲ್ಲಿ ಗೆಲ್ಲಲು ಸಾಧ್ಯವಿಲ್ಲ- ಅಮಿತ್ ಶಾ, ಕೇಂದ್ರ ಸಚಿವ

 ಏಕೆಂದರೆ ದೇಶವನ್ನೇ ಮಾರುವವರನ್ನು ನಾಯಕರಾಗಿಸಿದ ದಾಖಲೆ ಗುಜರಾತ್‌ನವರ ಹೆಸರಲ್ಲಿದೆ.

ಬಿಡಿಎ ವಸತಿ ಯೋಜನೆಯಡಿ ಗುತ್ತಿಗೆ ನೀಡಿಕೆ ಪ್ರಕರಣದಲ್ಲಿ ತಮ್ಮ ಕುಟುಂಬವನ್ನು ಸಿಲುಕಿಸಲು ಹಿಂದಿನಿಂದಲೂ ಪ್ರಯತ್ನಗಳು ನಡೆಯುತ್ತಿವೆ - ಬಿ.ವೈ.ರಾಘವೇಂದ್ರ, ಸಂಸದ

 ಉಳಿದ ಪ್ರಕರಣಗಳಲ್ಲಿ ನೀವಾಗಿಯೇ ಸಿಲುಕಿ ಕೊಂಡಿರುವುದು ಎಂದಾಯಿತು.

ಗುತ್ತಿಗೆದಾರರು ಪರ್ಸೆಂಟ್ ಆರೋಪ ಮಾಡಿ ಸರಕಾರದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ - ಜಿ.ಟಿ. ದೇವೆಗೌಡ, ಶಾಸಕ

ಮಾನ ಮರ್ಯಾದೆ ಇದ್ದವರು ಪರ್ಸೆಂಟ್ ವ್ಯವಹಾರಕ್ಕಿಳಿಯುತ್ತಾರೆಯೇ ?

ಕೇಂದ್ರದಲ್ಲಿ ಬಿಜೆಪಿಯೇತರ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುವುದು - ನಿತೀಶ್ ಕುಮಾರ್, ಬಿಹಾರ ಸಿಎಂ

ಕಾಶ್ಮೀರಕ್ಕೆ ಕನಿಷ್ಠ ರಾಜ್ಯದ ಸ್ಥಾನ ಮಾನ ಸಿಕ್ಕೀತೆ ?

ಒತ್ತಡದ ಜಗತ್ತಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯದ ಸುಸ್ಥಿರ ಸ್ಥಿತಿ ಅಗತ್ಯವಾಗಿದೆ - ಜಯಪ್ರಕಾಶ್ ಹೆಗ್ಡೆ, ಹಿಂ.ವ. ಆಯೋಗದ ಅಧ್ಯಕ್ಷ

ಬಿಜೆಪಿಯೊಳಗೆ ತೀರಾ ಒತ್ತಡದಲ್ಲಿ ಬದುಕುತ್ತಿರುವಂತೆ ಇದೆ.

ನನಗೆ ರಾಷ್ಟ್ರ ರಾಜಕಾರಣ ಅನಿವಾರ್ಯವಲ್ಲ - ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ದೇಶದ ಯಾವುದೇ ಮುನಿಸಿಪಾಲ್ಟಿಗೆ ಕೂಡಾ ಯಾವುದೇ ಪುಢಾರಿ ಅನಿವಾರ್ಯನಲ್ಲ.

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ಉತ್ತರ ಕೊರಿಯಾ ಮಾಡಲು ಹೊರಟ್ಟಿದ್ದಾರೆ - ಸುವೇಂದು ಅಧಿಕಾರಿ, ಪ.ಬಂ. ಬಿಜೆಪಿ ನಾಯಕ
ಭಾರತವನ್ನು ಪಾಕಿಸ್ತಾನ ಮಾಡಲು ಹೊರಟ ನಿಮಗಿಂತ ವಾಸಿ.

ರಾಜ್ಯ ಸರಕಾರ ಎಲ್ಲ ವಲಯಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೆ ಮುಂದಾಗಿರುವುದು ಸಂತಸ ತಂದಿದೆ - ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

 ಈ ಹಿಂದೆ ತಂದ ಕಾಯ್ದೆಗಳಿಂದ ಕನ್ನಡ ಉದ್ಧಾರ ಆಯಿತೇ ?

ಪ್ರಧಾನಿ ಮೋದಿ ಅವರ ಹೊರತು ಬೇರೆ ಯಾರಿಗೂ ಈ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ - ಪ್ರಮೋದ್ ಸಾವಂತ್, ಗೋವಾ ಸಿಎಂ

ಯಾರೂ ಮುನ್ನಡೆಸಲು ಸಾಧ್ಯವಿಲ್ಲದಷ್ಟು ದೇಶವನ್ನು ಗಬ್ಬೆಬ್ಬಿಸಿದ್ದಾರೆ.

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...