×
Ad

ಚಾಮರಾಜನಗರ | ಕೂಡ್ಲೂರು ಗ್ರಾಪಂನಿಂದ ಒಂದೇ ರಸ್ತೆಗೆ ಎರಡು ಕಾಮಗಾರಿ: ಆರೋಪ

Update: 2022-09-19 00:03 IST
ಸಾಂದರ್ಭಿಕ ಚಿತ್ರ

ಚಾಮರಾಜನಗರ, ಸೆ.18: ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿರುವ ಅಂಶ ದಾಖಲೆ ಸಮೇತ ಬೆಳಕಿಗೆ ಬಂದಿರುವುದು ವರದಿಯಾಗಿದೆ.

ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡರಾಯಪೇಟೆ ಗ್ರಾಮದ ಮುಖ್ಯ ರಸ್ತೆಯಂದ ಜಮೀನು ಅಭಿವೃದ್ಧಿ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರ ಬದಲಿಗೆ ಜೆಸಿಬಿ ಬಳಸಿ ಒಂದೇ ರಸ್ತೆಗೆ ಎರಡು ಕಾಮಗಾರಿ ನಡೆದಿರುವ ಅಂಶ ಬಹಿರಂಗಗೊಂಡಿದೆ.

ಕೂಡ್ಲೂರು ಗ್ರಾ.ಪಂ ಹಿಂದಿನ ಪಿಡಿಒ ರಂಜಿತಾ ಎಂಬವರು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕ್ರಮ ನಡೆಸಿದ್ದು, ಇದಕ್ಕೆ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಇಂಜನಿಯರ್ ರಾಗಿಣಿ ಎಂಬವರು ಸಹಕಾರ ನೀಡಿದ್ದಾರೆ ಎನ್ನಲಾಗುತ್ತಿದೆ.

ಸಾರ್ವಜನಿಕರ ಬಳಕೆಯ ರಸ್ತೆ ಬದಲಿಗೆ ಕೋಳಿ ಫಾರಂ ರಸ್ತೆಗೆ ಎರಡು ಕಾಮಗಾರಿಯಿಂದ 8 ಲಕ್ಷ ರೂ. ಅನುದಾನ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದೊಡ್ಡರಾಯಪೇಟೆ ಗ್ರಾಮದ ರಾಜಣ್ಣ ರವರ ಜಮೀನಿನಿಂದ ಶೇಖರ್ ಜಮೀನು ನಡುವಿನ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ನಾಗೇಂದ್ರ ರವರಿಗೆ ಸೇರಿದ ಕೋಳಿಫಾರಂಗೆ ರಸ್ತೆ ದುರಸ್ತಿಯನ್ನು ಜೆಸಿಬಿ ಯಂತ್ರ ಬಳಸಿ ಕಾಮಗಾರಿ ಮಾಡಲಾಗಿದೆ ಎಂದು ದೂರಲಾಗಿದೆ.

ದೊಡ್ಡರಾಯಪೇಟೆ ಮುಖ್ಯರಸ್ತೆಯಿಂದ ಸಿ.ಪಿರಾಜಣ್ಣರವರ ಜಮೀನಿನ ತನಕ ರಸ್ತೆ ಅಭಿವೃದ್ಧಿ (1508001/SA   93393042892372853) 617 ಮಾನವ ದಿನಗಳಿಗೆ 1.96.053 ರೂ. ಪಾವತಿ ಮಾಡಲಾಗಿದೆ. ರಾಜಣ್ಣರವರ ಜಮೀನಿನಿಂದ ಶೇಖರ್ ಜಮೀನಿನ ತನಕ ರಸ್ತೆ ಅಭಿವೃದ್ದಿ ( 1508001 /SA  93393042892372852) 665 ಮಾನವ ದಿನಗಳಿಗೆ 2.05.485 ರೂ. ಪಾವತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಾಮಗಾರಿ ಮಾಡಿರುವ ಬಗ್ಗೆ ನಾಮಫಲಕ ಹಾಕಲು ನಿರ್ದೇಶನ ಇದ್ದರೂ ಸಹ ಜನ ಸಂದಣಿ ಕಡೆ ಹಾಕದೆ ಜನರು ತಿರುಗಾಡದೇ ಇರುವ ಕೋಳಿ ಫಾರಂ ಬಳಿ ನಾಮಫಲಕ ಹಾಕಲಾಗಿದೆ. ಅದೂ ಅಲ್ಲದೆ ಎಂಎಎಸ್‌ನ್ನು ವೆಬ್‌ಸೈಟ್‌ನಲ್ಲಿ ಡಿಲಿಟ್ ಮಾಡಿರುವ ಅಕ್ರಮವನ್ನು ತೋರ್ಪಡಿಕೆ ಮಾಡಿದಂತಾಗಿದೆ. ಈಗಾಗಲೇ ಈ ಅಕ್ರಮ ಕಾಮಗಾರಿ ಜೆಸಿಬಿ ಯಂತ್ರ ಬಳಕೆ ಮಾಡಿರುವ ಬಗ್ಗೆ ಜಿಪಂ ಸಿಇಒ ಗಮನಕ್ಕೆ ಬಂದಿದ್ದು, ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News