ಡಿಸೆಂಬರ್ ವೇಳೆಗೆ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆ: ಸಚಿವ ಬಿ.ಸಿ. ನಾಗೇಶ್

Update: 2022-09-19 13:48 GMT

ಬೆಂಗಳೂರು: ರಾಜ್ಯದ ಶಾಲಾ ಪಠ್ಯ ಪುಸ್ತಕಗಳಲ್ಲಿ ನೈತಿಕ ಶಿಕ್ಷಣವನ್ನು ಅಳವಡಿಸಲು ರಾಜ್ಯ ಸರಕಾರ ಮುಂದಾಗಿದ್ದು, ಅದರಲ್ಲಿ ಭಗವದ್ಗೀತೆ(Bhagavad Gita) ಬೋಧನೆಯನ್ನು ಈ ವರ್ಷದಿಂದಲೇ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಪ್ರಾಣೇಶ್ ಎಂ.ಕೆ. ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ ಸಂಬಂಧ ಒಂದು ತಜ್ಞರ ಸಮಿತಿಯನ್ನು ರಚಿಸಿ ಅವರ ಶಿಫಾರಸ್ಸಿನ ಆಧಾರದ ಮೇಲೆ ಮುಂದಿನ ನಡೆ ಅನುಸರಿಸಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಶಾಲಾ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರಕಾರದ ಮುಂದಿಲ್ಲ. ಡಿಸೆಂಬರ್ ನಿಂದ ನೈತಿಕ ಶಿಕ್ಷಣವನ್ನು ಅಳವಡಿಸಲು ಮುಂದಾಗಿದ್ದು, ಆ ಸಮಯದಲ್ಲಿ ಈ ಬಗ್ಗೆ ಚಿಂತಿಸಲಾಗುವುದು ಹಾಗೂ ಮಕ್ಕಳಿಗೆ ಭಗವದ್ಗೀತೆಯ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.  

ಬಾಬಾ ಬುಡನ್‍ಗಿರಿ ಎಂಬ ಹೆಸರನ್ನು ದತ್ತಾತ್ರೇಯ ಪೀಠ ಎಂದು ಪಠ್ಯ ಪುಸ್ತಕದಲ್ಲಿ ಬದಲಾಯಿಸಬೇಕು, ಇತಿಹಾಸದ ಹೆಸರು ಮುಂದುವರೆಸಬೇಕು ಎನ್ನುವ ಪ್ರಸ್ತಾಪ ಇದೆ. ಇತಿಹಾಸದ ತಪ್ಪುಗಳನ್ನು ಪಠ್ಯದಲ್ಲಿ ಸರಿಮಾಡುವ ಕೆಲಸ ಮಾಡುತ್ತೇವೆ. ಬಾಬಾ ಬುಡನ್‍ಗಿರಿ ಹೆಸರನ್ನು ಈಗ ಬದಲಾವಣೆ ಮಾಡಲಾಗಿದೆ ಎಂದರು.

6ರಿಂದ 10ನೆ ತರಗತಿಯ ಸಮಾಜ, ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಸ್ಥಳೀಯ ರಾಜರ ಇತಿಹಾಸ ಕುರಿತು ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ ರಾಜ ಮನೆತನಗಳ ಕುರಿತು ಪಠ್ಯ ರಚಿಸಿ ಅಳವಡಿಸಲಾಗಿದೆ ಹಾಗೂ ಮುಂದಿನ ಪಠ್ಯ ಪುಸ್ತಕ ಪುನಾರಚನೆ ಸಂದರ್ಭದಲ್ಲಿ ಜಿಲ್ಲೆಗಳ ಸ್ಥಳೀಯ ಇತಿಹಾಸವನ್ನು ಆಯಾ ಜಿಲ್ಲೆಯ ಮಕ್ಕಳಿಗೆ ತಿಳಿಸುವ ಕುರಿತಂತೆ ತಜ್ಞರ ಸಲಹೆ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 

ಪ್ರಸ್ತುತ ಜಾರಿಯಲ್ಲಿರುವ 7ನೆ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಮೈಸೂರು ಮತ್ತು ಇತರ ಸಂಸ್ಥಾನಗಳು ಅಧ್ಯಾಯದಲ್ಲಿ ತುಳುನಾಡು ಎಂಬ ಪ್ರತ್ಯೇಕವಾದ ಉಪ ಘಟಕವಿದ್ದು, ತುಳುನಾಡಿನಲ್ಲಿ ಆಳಿದ ಅರಸು ಮನೆತನಗಳ ಬಾರ್ಕೂರು ರಾಜಧಾನಿಯ ಆಳುಪ ಮನೆತನದ ವಿವರ ಇದೆ ಎಂದರು.

6ರಿಂದ 10ನೆ ತರಗತಿಗೆ ತೃತೀಯ ಭಾಷೆಯನ್ನಾಗಿ ಅಳವಡಿಸಲಾಗಿರುವ ತುಳು ಪಠ್ಯ ಪುಸ್ತಕಗಳಲ್ಲಿ ತುಳುನಾಡಿನ ಆಡಳಿತ, ಕಲೆ, ಸಂಸ್ಕೃತಿ, ಭಾಷೆ ಮುಂತಾದ ವಿಷಯಗಳನ್ನು ಸೇರಿಸಲಾಗುವುದು ಎಂದು ಹೇಳಿದರು. 

200 ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ
ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 2120 ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 2 ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆಯ ಕುರಿತು ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿದೆ. ಸಹಮತಿ ನೀಡಿದ ನಂತರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು. ಪ್ರಸ್ತುತ 200 ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ತುಂಬಲು ಆರ್ಥಿಕ ಇಲಾಖೆಯು ಸಹಮತಿ ನೀಡಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಚಿತ್ರಕಲಾ ಶಿಕ್ಷಕರನ್ನೂ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News