ಸ್ಮಶಾನ ಕಾರ್ಮಿಕರಿಗೆ ಖಾಯಂ ಸಮಾನ ವೇತನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-09-19 14:36 GMT

ಬೆಂಗಳೂರು: ‘ರಾಜ್ಯದ ವಿವಿಧ ಸ್ಮಶಾನಗಳಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಖಾಯಂ ಸಮಾನ ವೇತನ ನೀಡುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಬೇಕು' ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸ್ಮಶಾನ ಕಾರ್ಮಿಕರರೊಂದಿಗೆ ಸಭೆ ನಡೆಸಿ ಅವರ ಕುಂದು-ಕೊರತೆಗಳನ್ನು ಆಲಿಸಿದ ಬಳಿಕ ಅವರು, ‘ಸ್ಮಶಾನ ಕಾರ್ಮಿಕರು ಸ್ಮಶಾನಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಕಾರ್ಮಿಕ ವರ್ಗವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 200 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೇವಲ ಇಬ್ಬರು ಮಾತ್ರ ಖಾಯಂ ಸಿಬ್ಬಂದಿಯಾಗಿದ್ದಾರೆ. ಉಳಿದ 148 ಸಿಬ್ಬಂದಿ ನೇರ ವೇತನ ಪಡೆಯುತ್ತಿದ್ದು ಅವರನ್ನು ಖಾಯಂಗೊಳಿಸುವ ಅಥವಾ ಅವರಿಗೆ ಖಾಯಂ ಹುದ್ದೆಯ ಸಮಾನ ವೇತನ ನೀಡುವ ಬಗ್ಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

‘ಅಲ್ಲದೆ, ಪ್ರತಿ ಕಂದಾಯ ಗ್ರಾಮಕ್ಕೊಂದು ಸ್ಮಶಾನ ಇರಬೇಕೆಂದು ಪ್ರಸ್ತಾವನೆ ಇದೆ. ಮಹಾನಗರ ಪಾಲಿಕೆಗಳು, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ, ಗ್ರಾಮ ಪಂಚಾಯ್ತಿಗಳಲ್ಲಿನ ಸ್ಮಶಾನಗಳಲ್ಲಿ ಕೆಲಸ ನಿರ್ವಹಿಸುವವರ ಮಾಹಿತಿಯನ್ನು ಕ್ರೋಡೀಕರಿಸಿ ಅವರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸುವ ಸಂಬಂಧ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಹಾಗೂ ಈ ಸಂಬಂಧ ಶೀಘ್ರವೇ ಸಂಬಂಧಿಸಿದ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಅವರು ಭರವಸೆ ನೀಡಿದರು.

‘ಸ್ಮಶಾನ ಕಾರ್ಮಿಕರಿಗೆ ವಸತಿ ಯೋಜನೆ, ಅವರ ಮಕ್ಕಳಿಗೆ ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವ ಹಾಗೂ ಪಡಿತರ ವಿತರಣೆ ಸಂಬಂಧ ಯೋಜನೆಗಳನ್ನು ರೂಪಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಆಯುಕ್ತ ಡಾ.ಕೆ.ರಾಕೇಶ್ ಕುಮಾರ್, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯಸ್ಥಾಪಕ ನಿರ್ದೇಶಕ ಕೆ.ಎಂ.ಸುರೇಶ್, ಅಲೆಮಾರಿ ಕೋಶದ ವಿಶೇಷಾಧಿಕಾರಿ ಡಾ.ದೇವರಾಜ್, ಪಂಚಾಯತ್ ರಾಜ್ ಇಲಾಖೆ ನಿರ್ದೇಶಕಿ ಶಿಲ್ಪಾ ಶರ್ಮಾ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಮಂಜುಶ್ರೀ, ಸ್ಮಶಾನ ಕಾರ್ಮಿಕರ ಸಂಘದ ಅಧ್ಯಕ್ಷ ಅಂತೋಣಿ, ಕಾರ್ಯದರ್ಶಿ ಶೌರಿರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News